Thursday, November 24, 2022

ಹತ್ತಿ ಕಟಗಿ, ಬತ್ತಿ ಕಟಗಿ

 ಹತ್ತಿ ಕಟಗಿ, ಬತ್ತಿ ಕಟಗಿ


ಹತ್ತಿ ಕಟಗಿ

ಬತ್ತಿ ಕಟಗಿ

ಬಾವಣ್ಣವರ 

ಬಸಪ್ಪನವರ

ಕೈ ಕೈ ದೂಳಗೈ

ಪಂಚಂ ಪಗಡಂ

ನೆಲಕಡಿ ಹನುಮ

ದಾತರ ದರ‍್ಮ

ತಿಪ್ಪಿ ಮೇಲೆ ಕೋಳಿ

ರಗತ ಬೋಳಿ


ಕೈ ಕೈ ಎಲ್ಲಿ ಹೋಯ್ತು ?

ಕದದ ಸಂದ್ಯಾಗ !

ಕದ ಏನ್ ಕೊಟ್ತು ?

ಚೆಕ್ಕಿ ಕೊಟ್ತು !

ಚೆಕ್ಕಿ ಏನ್ ಮಾಡ್ದಿ ?

ಒಲಿಯಾಗ ಹಾಕ್ದೆ !

ಒಲಿ ಏನ್ ಕೊಟ್ತು ?

ಬೂದಿ ಕೊಟ್ತು !

ಬೂದಿ ಏನ್ ಮಾಡ್ದಿ ?

ತಿಪ್ಪಿಗಾಕಿದೆ !

ತಿಪ್ಪಿ ಏನ್ ಕೊಟ್ತು ?

ಗೊಬ್ಬರ ಕೊಟ್ತು !

ಗೊಬ್ಬರ ಏನ್ ಮಾಡ್ದಿ ?

ಹೊಲಕ ಹಾಕಿದೆ !

ಹೊಲ ಏನ್ ಕೊಟ್ತು ?

ಜೋಳ ಕೊಟ್ತು !

ಜೋಳ ಏನ್ ಮಾಡ್ದಿ ?

ಚೊಲೊ ಚೊಲೊ ನಾ ತಗಂಡೆ

ಸೆರಗ ಮುರಗ(ಕೆಟ್ಟಿದ್ದೆಲ್ಲಾ) ಕುಂಬಾರಗ ಕೊಟ್ಟೆ !

ಕುಂಬಾರ ಏನ್ ಕೊಟ್ಟ ?

ಗಡಿಗಿ ಕೊಟ್ಟ !

ಗಡಿಗಿ ಏನ್ ಮಾಡ್ದಿ ?

ಬಾವ್ಯಾಗ ಬಿಟ್ಟೆ !

ಬಾವಿ ಏನ್ ಕೊಟ್ತು ?

ನೀರು ಕೊಟ್ತು !

ನೀರು ಏನ್ ಮಾಡ್ದಿ ?

ಗಿಡಕ್ಕ ಹಾಕ್ದೆ !

ಗಿಡ ಏನ್ ಕೊಟ್ತು ?

ಹೂವು ಕೊಟ್ತು !

ಹೂವು ಏನ್ ಮಾಡ್ದೆ ?

ದೇವ್ರಿಗೆ ಏರಿಸಿದೆ… !


ಉತ್ತರ ಕರ್ನಾಟಕದ ಊರುಗಳಲ್ಲಿ ಚಿಕ್ಕ ಮಕ್ಕಳು ಒಂದೆಡೆ ಸೇರಿದಾಗ ಮೇಲಿನ ಸಾಲುಗಳನ್ನು ಹೇಳುತ್ತಾ ಆಟ ಆಡುವ ದೃಶ್ಯ ಸಾಮಾನ್ಯ. ನಾಕೆಂಟು ಮಕ್ಕಳು ಸುತ್ತಲೂ ಕುಳಿತು ಅಂಗೈ ಕೆಳಮುಕ ಮಾಡಿ, ನೆಲಕ್ಕೆ ಹಚ್ಚಿ, ಒಂದನೆಯ ಕೈಯಿಂದ ಆರಂಬಿಸಿ-ಹತ್ತಿಕಟಗಿ..ಬತ್ತಿಕಟಗಿ ಎನ್ನುತ್ತಾ ಆಟವಾಡುತ್ತಾರೆ. ಇಲ್ಲಿರುವ ಆಟದ ಸ್ವರೂಪ ಕುರಿತು ಹೇಳುವುದು ನನ್ನ ಉದ್ದೇಶವಲ್ಲ. ಕೂಡಿ ಆಡುವದರೊಂದಿಗೆ ಮಕ್ಕಳು ಪಡುವ ಸಂತೋಷದ ಕುರಿತು ಹೇಳುವ ಇರಾದೆಯೂ ನನಗಿಲ್ಲ. ಅದ್ಬುತ ಲಯ ವಿನ್ಯಾಸದ ವಿವರಣೆಗೂ ನಾ ಕೈ ಹಾಕುವುದಿಲ್ಲ. ಆಟದ ನಿಯಮ ಕುರಿತು ಒಣ ವಿವರಣೆ ನೀಡುವ ಗೋಜಿಗೂ ನಾನು ಹೋಗುವುದಿಲ್ಲ.


ನಾವೆಲ್ಲ ಚಿಕ್ಕಂದಿನಲ್ಲಿ ಹಾಡಿದ ಈ ಹಾಡು ಇಂದಿಗೂ ಹಚ್ಚ ಹಸಿರು! 


ಹತ್ತಿ ಕಟಗಿ ಎಂದರೆ ಜೀವವಿದ್ದ ಮನುಷ್ಯ. ಬತ್ತಿ ಕಟಗಿಯಾಗುವುದೆಂದರೆ ಸಾಯುವುದು. ಸತ್ತ ಮೇಲೆ ಕೆಲ ಹೊತ್ತಿನಲ್ಲಿಯೆ ದೇಹ(ಹೆಣ) ಬಾಯುತ್ತದೆ. ಅದಕ್ಕೆ ಬಾಯುವ ಅಣ್ಣನವರು ಅವರು(ಬಾವಣ್ಣವರ). ಎರಡು ದಿನ ಹಾಗೆಯೇ ಇಟ್ಟರೆ ಬಸಿಯಪ್ಪನವರೂ ಹೌದು(ಬಸಪ್ಪನವರು). ಆದ್ದರಿಂದಲೇ ಅದು ಧೂಳಾಗುವ ಕಾಯ(ಕೈ ಅಲ್ಲ ಅದು ಕಾಯ – ಕಾಯ ಕಾಯ ದೂಳ ಕಾಯ) ಪಂಚಭೂತಗಳಲ್ಲಿ ಕರಗಿ ಹೋಗುವ ಕಾಯ(ಪಂಚಂ ಪಗಡಂ). ಆ ದೇಹಕ್ಕೆ ಸಂಸ್ಕಾರ ಕೊಡಬೇಕಲ್ಲವೆ? ನೆಲ ಕಡಿಯಲು ಹನುಮನಿಗೆ ಹೇಳಬೇಕಾಗುತ್ತದೆ(ನೆಲ ಕಡಿ ಹನುಮ). ಧನವಂತರಾದವರು ದರ‍್ಮವನ್ನೂ ದಾನವನ್ನೂ ಮಾಡಬೇಕಾಗುತ್ತದೆ. ಮಾಡುತ್ತಾರೆ(ದಾತರ ಧರ್ಮ).


ಆದರೆ ಈವರೆಗಿನ ಅವನ ಜೀವನ ತಿಪ್ಪೆಯ ಮೇಲಿನ ಕೋಳಿಯಂತೆ. ಸಂಸಾರದ ಹೊಲಸನ್ನೇ ಕೆದರಿದೆ (ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೂ ತಿಪ್ಪೆ ಕೆದರೂದ ಬಿಡೂದಿಲ್ಲ – ಎಂಬ ಗಾದೆ ಮಾತು ಇದನ್ನೇ ಹೇಳುತ್ತದೆ ಎನಿಸುತ್ತದೆ). ಇದರ ಫಲವಾಗಿ ರಕ್ತದಲ್ಲಿಯೇ ಹುಟ್ಟಿ ಹುಟ್ಟಿ ಬರುವ ಜನ್ಮಾಂತರವನ್ನು ಪಡೆದಿದೆ. ಇದೇ ತಿಪ್ಪೆಮೇಲೆ ಕೋಳಿ ರಗತಬೋಳಿ.


ಈ ಶಿಶುಪ್ರಾಸದ ಮೊದಲ ಭಾಗ ಇಲ್ಲಿಗೆ ಮುಗಿಯಿತು. ಇನ್ನು ಮುಂದಿನ ಭಾಗ ಏನನ್ನು ಹೇಳುತ್ತದೆ? ಪ್ರಶ್ನೋತ್ತರ ರೂಪದಲ್ಲಿರುವ ಇದು ವಸ್ತುವಿನ ಪರಿವರ್ತನೆಯ ಸತ್ಯವನ್ನು ಸಾಂಕೇತಿಕವಾಗಿ ತಿಳಿಸುತ್ತದೆ. ಜಗತ್ತಿನ ಯಾವ ವಸ್ತುವಿಗೂ ಜೀವಿಗೂ ನಿಜ ಅ‍ರ್ಥದಲ್ಲಿ ಸಾವಿಲ್ಲ. ಅದು ರೂಪಾಂತರ ಹೊಂದುತ್ತಿರುತ್ತದೆ ಅಷ್ಟೆ.


ಕಾಯ ಎಲ್ಲಿ ಹೋಯಿತು?(ಕೈ ಕೈ ಎಲ್ಲಿ ಹೋಯಿತು?) ಕದದ ಸಂಧಿಯಲ್ಲಿ. ಕದದ ಸಂದಿ ಎಂಬುದು ಮತ್ತೆ ಸಂಸಾರದ ಸಂಗತಿ ಕಡೆಗೆ ಬೊಟ್ಟು ಮಾಡುತ್ತದೆ. ಅಲ್ಲಿಂದ ಹೊಲ ಏನ್ ಕೊಟ್ಟಿತು? ಎನ್ನುವವರೆಗೆ ಚಕ್ಕಿ, ಬೂದಿ, ಗೊಬ್ಬರ ಮುಂತಾದವು ರೂಪಾಂತರದ ಸಂಗತಿಗಳನ್ನೇ ಹೇಳುತ್ತವೆ . ಜೊತೆಗೆ ಬೂದಿ ,ಗೊಬ್ಬರ, ಹೊಲ ಇವು ಬೇಸಾಯ ಸಂಬಂಧದ ಕ್ರಿಯೆಗಳನ್ನು ಸೂಚಿಸುತ್ತವೆ. ಕುತೂಹಲಕರ ಸಂಗತಿಯೆಂದರೆ, ಹೊಲ ಕೊಟ್ಟ ಜೋಳದಲ್ಲಿ, ಚಲೊ(ಒಳ್ಳೆದು) ಇದ್ದವನ್ನು ತಾ ತಿಂದು ಸೆರಗು ಮುರಗನ್ನು ಕುಂಬಾರನಿಗೆ ಕೊಡುವ ವಿಧಾನ.


ಕುಂಬಾರ ಗಡಿಗೆ ಸೃಷ್ಟಿ ಮಾಡುವ ಸೃಷ್ಟಿಕರ್ತ( ದೇಹಕ್ಕೆ ಗಡಿಗೆ ಎನ್ನುವ ಪರಂಪರೆ ಅನುಬಾವ ಸಾಹಿತ್ಯದಲ್ಲಿದೆ). ಅವನಿಗೆ ಸೆರಗು ಜೋಳವನ್ನು ಮಾತ್ರ ಕೊಡುತ್ತಾನೆ!(ನಮ್ಮ ವರ್ತನೆಗೆ ಈ ಸಂಗತಿಯನ್ನು ಹೋಲಿಸಿ ನೋಡಬಹುದು. ದೇವರಿಗೆ ಮಾಡುವ ಕಡಬು ನೈವೇದ್ಯಗಳೆಲ್ಲಾ ಚಿಕ್ಕವಿರುತ್ತವೆ ಇಲ್ಲವೇ ನೆಪಮಾತ್ರಕ್ಕೆ ಇರುತ್ತವೆ). ಭೋಗ ಜೀವನಕ್ಕೆ ಮೊದಲ ಮಣೆ ಹಾಕಿದ ಮನುಷ್ಯ ಕೊನೆಗೂ ಎಚ್ಚರಗೊಳ್ಳುತ್ತಾನೆ (ಗಡಿಗೆ ಏನ್ ಮಾಡಿದಿ?). ಹಾಗೆ ಎಚ್ಚರಗೊಂಡ ಮನುಷ್ಯ ಗಡಿಗೆಯನ್ನು ಭಕ್ತಿಜಲ ತುಂಬಿಕೊಳ್ಳಲು ಬಾವಿಗೆ ಬಿಡುತ್ತಾನೆ(ಬಾವ್ಯಾಗ ಬಿಟ್ಟೆ). ಆ ಜಲವನ್ನೇ(ಬಾವಿ ಏನ್ ಕೊಟ್ಟಿತು? -ನೀರ ಕೊಟ್ಟಿತು) ಗಿಡಕ್ಕೆ ಹಾಕಿ ಜೀವಾತ್ಮ ಪುಷ್ಪ ಅರಳಲು ಕಾರಣವಾಗುತ್ತಾನೆ. ಹಾಗೆ ಅರಳಿದ ಹೂವನ್ನು ದೇವರಿಗೆ ಅರ್ಪಿಸಿ ಧನ್ಯನಾಗುತ್ತಾನೆ (ಹೂವು ಏನ್ ಮಾಡಿದಿ ?- ದೇವರಿಗೆ ಏರಿಸಿದೆ).


ಇಲ್ಲಿಗೆ ಜೀವನ ಕತೆಗೆ ಒಂದು ‍ಅರ್ಥ ಬರುತ್ತದೆ. ಜೀವನ ಸಾರ್ಥಕವಾಗುತ್ತದೆ. ಮೊದಲ ಭಾಗದ ಅಪೂರ್ಣತೆ ಇಲ್ಲಿ ಪೂರ್ಣವಾಗುತ್ತದೆ. ಇಡೀ ಬದುಕಿನ ಚಿತ್ರಣವನ್ನು ಇಷ್ಟೊಂದು ಅಡಕವಾಗಿ, ‍ಅರ್ಥಪೂರ್ಣವಾಗಿ ಹೇಳಿದ ರೀತಿ ಬೆರಗು ಹುಟ್ಟಿಸುತ್ತದೆ! ರಚನೆಯ ಸ್ವರೂಪದಲ್ಲಿ ಒಂದು ಸಂಗತಿಯಿಂದ ಇನ್ನೊಂದು ಸಂಗತಿಗೆ  ಕೊಡುತ್ತ ಸಾಗುವ ಈ ಶಿಶುಪ್ರಾಸ ರಂಜನೆಯ ಜೊತೆಗೆ ನೆನಪಿನ ಶಕ್ತಿಯನ್ನು ಹರಿತಗೊಳಿಸಲು, ಸಹ ಸಂಬಂಧವನ್ನು ಕಲ್ಪಿಸಲು ನೆರವಾಗುತ್ತದೆ. ಮಕ್ಕಳ ಮನೋವಿಕಾಸಕ್ಕೆ ಕಾರಣವಾಗುತ್ತದೆ. ದಯವಿಟ್ಟು,ಇಂತಹ ಜನಪದ ಸಾಹಿತ್ಯವನ್ನು ಉಳಿಸೋಣ, ಬೆಳೆಸೋಣ

Wednesday, January 14, 2015

ಬೆಂಕಿ ಚೆಂಡು


ಸೂರ್ಯ ಅಂದ್ರೆ ಭೂಮಿಗೆ ಚೈತನ್ಯ. ಅದೆಷ್ಟೋ ವೋಲ್ಟ್​ಗಳಷ್ಟು ಶಕ್ತಿಯನ್ನು ದಿನವೂ ಹೊರಚೆಲ್ಲೋ ಸೂರ್ಯನ ಮೇಲ್ಮೈ ಹೇಗಿರುತ್ತೆ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇಂಥ ಪ್ರಯತ್ನವೊಂದನ್ನು ನಾಸಾ ಮಾಡಿದೆ. ಸೂರ್ಯನ ಮೇಲ್ಮೈನಲ್ಲಿ ನಡೆಯೋ ಸೋಲಾರ್ ಫ್ಲೇರ್ ಅಂದ್ರೆ ಸೌರ ವಿದ್ಯಮಾನವನ್ನು ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಈ ವರ್ಷದ ಮೊದಲ ಅತ್ಯದ್ಭುತ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಇದೇ ಸೋಮವಾರ ರಾತ್ರಿ 11.24ರ ಹೊತ್ತಿಗೆ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ.ಸೋಲಾರ್ ಡೈನಮಿಕ್ ಅಬ್ಸರ್ವೇಟರಿ ಎಂಬ ಸ್ಪೇಸ್ ಏಜೆನ್ಸಿ ಇದನ್ನ ಸೆರೆಹಿಡಿದಿದೆ. ಅತ್ಯಂತ ಪ್ರಖರವಾದ ಬೆಂಕಿಯುಂಡೆಗಳನ್ನು ಉಗುಳುತ್ತಿರುವ ಸೂರ್ಯನ ಅಪರೂಪದ ಚಿತ್ರ ವಿಜ್ಞಾನಿಗಳಲ್ಲಿ ಸಂತಸ ಮೂಡಿಸಿದೆ. ಈ ರೀತಿ ಬೆಂಕಿಯುಡೆ ಸಿಡಿಯುವ ಘಟನೆಗಳು ನಿತ್ಯವೂ ನಡೆಯುತ್ತಿರುತ್ತವೆ. ಆದ್ರೆ ಕೆಲವೊಮ್ಮೆ ಇದು ದೈತ್ಯ ಸ್ವರೂಪದಲ್ಲಿ ನಡೆಯುತ್ತೆ. ಸೂರ್ಯನಿಂದ ಸಿಡಿಯೋ ಅತಿನೇರಳೆ ಕಿರಣಗಳು ಭೂಮಿಯ ಕಾಂತಕ್ಷೇತ್ರವನ್ನು ದಾಟಲು ಸಾಧ್ಯವಾಗಲ್ಲ. ಅದ್ರೆ ಅತಿದೊಡ್ಡ ಸೌರ ವಿದ್ಯಮಾನ ಸಂಭವಿಸಿದರೆ ಕೆಲವೊಮ್ಮೆ ಉಪಗ್ರಹಗಳ ಕೆಲಸಕ್ಕೆ ಅಡ್ಡಿಯಾಗೋ ಸಾಧ್ಯತೆ ಇರುತ್ತೆ.

Saturday, December 27, 2014

ಪುಸ್ತಕ ಮನೆ


ಪುಸ್ತಕ ಮನೆ ಲೋಕಾರ್ಪಣೆ
ಅದೊಂದು ಅಪರೂಪದ ಸಮಾರಂಭ. ಬಳ್ಳಾರಿ ಜಿಲ್ಲೆಯ ಗಡಿ ಭಾಗದ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಯೊಬ್ಬರು ತಮ್ಮ ಹಳೆಯ ಮನೆ ಇದ್ದ ಜಾಗದಲ್ಲಿ ಪುಸ್ತಕ ಮನೆ ನಿರ್ಮಿಸಿ ಜ್ಞಾನ ದಾಸೋಹಕ್ಕೆ ಮುನ್ನುಡಿ ಬರೆದಿದ್ದಾರೆ. ಇವರೇ ಡಾ. ಹೆಚ್.ಎಂ. ಮರುಳಸಿದ್ದಯ್ಯ. ಖ್ಯಾತ ಸಮಾಜಶಾಸ್ತ್ರಜ್ಞ ಹಾಗೂ ಹಿರಿಯ ಸಾಹಿತಿ... ತಮ್ಮ ಬಹು ದಿನಗಳ ಬಯಕೆಯಂತೆ ಗ್ರಂಥಾಲಯವೊಂದನ್ನು ನಿರ್ಮಿಸಿ ದಾನ ಮಾಡಿ ತಮ್ಮೂರಿನ ಪ್ರೀತಿಯನ್ನು ಈ ಮೂಲಕ ತೋರಿಸಿದ್ದಾರೆ...
---------
 ಸಾಹಿತಿಗಳು ಪುಸ್ತಕದ ಹುಳುಗಳು.. ಪುಸ್ತಕಗಳ ಅಧ್ಯಯನ ಮಾಡ್ತಾರೆ. ಹೊಸ ಹೊಸ ಕೃತಿಗಳನ್ನು ರಚಿಸ್ತಾರೆ. ಆದ್ರೆ ಬಹಳಷ್ಟು ಜನ ಮಾಡದ ಕೆಲಸವೊಂದನ್ನು ಇವ್ರು ಮಾಡಿದ್ದಾರೆ. ಇವ್ರು ಪ್ರೊಫೆಸರ್ ಹೆಚ್.ಎಂ. ಮರುಳಸಿದ್ಧಯ್ಯ. ಬೆಂಗಳೂರು ವಿವಿಯ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಓದು, ಬರಹ, ಅಧ್ಯಾಪನೆಯಲ್ಲೇ ವೃತ್ತಿ ಜೀವನ ಕಳೆದ್ರು. ನಿವೃತ್ತಿಯ ಬಳಿಕ ಅವರ ಸಾಮಾಜಿಕ ಕಳಕಳಿಗೆ ಮತ್ತಷ್ಟು ಹೊಳಪು ಪಡೆದುಕೊಂಡಿತು. ಅದಕ್ಕೆ ಸಾಕ್ಷಿ ಈ ಪುಸ್ತಕ ಮನೆ...

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇ ಕುಂಬಳಗುಂಟೆ. ಬಹಳಷ್ಟು ಜನರಿಗೆ ಗೊತ್ತಿಲ್ಲದ ಕುಗ್ರಾಮ. ಒಂದೆಡೆ ಡ್ರಮ್ಸ್ ಬಾರಿಸ್ತಾ ಇರೋ ಹುಡುಗರು, ಇನ್ನೊಂದೆಡೆ ನಂದಿಕೋಲಿನ ಕುಣಿತ.. ಇದೆಲ್ಲಾ ನೋಡಿದ್ರೆ ಇದೊಂದು ಜಾತ್ರೆ ಅನ್ಸುತ್ತೆ. ಆದ್ರೆ ನಿಮ್ಮ ಊಹೆ ತಪ್ಪು. ಹಿರೇ ಕುಂಬಳಗುಂಟೆ ಗ್ರಾಮದಲ್ಲಿ  ನಡೆದದ್ದು ಪುಸ್ತಕ ಪ್ರೇಮಿಗಳ ಸಂಗಮ. ಮರುಳಸಿದ್ದಯ್ಯ ಅವ್ರು ಹುಟ್ಟಿ ಬೆಳೆದ ತಮ್ಮ ಮನೆಯನ್ನೇ ಪುನಃ ನವೀಕರಿಸಿದ್ದಾರೆ. ಇದು ಈಗ ಮನೆ ಅಲ್ಲ.. ಪುಸ್ತಕ ಮನೆ...

ತಮ್ಮ ಮನೆಯನ್ನು ತಾವು ಆಡಿ ಬೆಳೆದ ಊರಿನ ಜನರ ಜ್ಞಾನ ವಿಕಾಸಕ್ಕೆ ಅನುಕೂವಾಗಲಿ ಎಂದು ಗ್ರಂಥಾಲಯವಾಗಿ ಪರಿವರ್ತಿಸಿದ್ದಾರೆ ಡಾ. ಹೆಚ್​.ಎಂ. ಮರುಳಸಿದ್ದಯ್ಯ. ತಮ್ಮ 85ನೇ ಇಳಿ ವಯಸ್ಸಿನಲ್ಲಿ ನಡೆಯಲೂ ಕಷ್ಟಪಡುವ ಈ ಸ್ಥಿತಿಯಲ್ಲಿ ಬೆಂಗಳೂರಿನಿಂದ ತಮ್ಮ ಊರಿಗೆ ಆಗಮಿಸಿ, ಒಂದಷ್ಟು ಸಾಹಿತ್ಯಾಸಕ್ತರು, ಕುಟುಂಬ ವರ್ಗದವರು ಹಾಗೂ ಅಭಿಮಾನಿಗಳನ್ನು ಕಲೆಹಾಕಿ ಲೈಬ್ರರಿಯನ್ನು ಜನತೆಗೆ ಅರ್ಪಿಸಿದ್ದಾರೆ. ಇದ್ಕೆ ಜಿಲ್ಲಾ ಶಿಕ್ಷಣ ಇಲಾಖೆ ಬೆನ್ನೆಲುಬಾಗಿ ನಿಂತಿದ್ದು ಶ್ಲಾಘನೀಯ.
ಡಾ. ಹೆಚ್.ಎಂ. ಮರುಳಸಿದ್ದಯ್ಯ ಮತ್ತು ಅವರ ಧರ್ಮಪತ್ನಿ
ಪ್ರೊ. ಮರುಳಸಿದ್ದಯ್ಯ ಅವರ ತಂದೆ-ತಾಯಿ
ತಮ್ಮ ಹಳೆಯ ಮನೆಯ ಜಾಗವನ್ನು ಗ್ರಾಮದ ಗ್ರಂಥಾಲಯಕ್ಕೆ ದಾನ ನೀಡುವ ಮೂಲಕ ಗ್ರಾಮದ  ಮೇಲಿನ ಪ್ರೀತಿಯನ್ನು ಮರೆದಿದ್ದಾರೆ ಡಾ. ಹೆಚ್​ಎಂಎಂ. ಅವರ ಈ ಸೇವೆಗೆ ಪ್ರತಿಯಾಗಿ ಮರುಳಸಿದ್ದಯ್ಯನವರ ಕುರಿತು ಖ್ಯಾತ ಸಮಾಜಶಾಸ್ತ್ರಜ್ಞ ಪ್ರೊಫೆಸರ್ ಕೆ.ಭೈರಪ್ಪನವರು ಬರೆದ ಕೃತಿ ಕೂಡಾ ಬಿಡುಗಡೆಯಾಯ್ತು.

ಹಿರೇ ಕುಂಬಳಗುಂಟೆ ಗ್ರಾಮದಲ್ಲಿ ತುಂಬು ಕುಟುಂಬದಲ್ಲಿ ಜನಿಸಿದ ಹೆಚ್.ಎಂ. ಮರುಳಸಿದ್ದಯ್ಯನವರು ಸಮಾಜಶಾಸ್ತ್ರದಲ್ಲಿ ಹೆಸರು ಮಾಡಿದ್ದು ಆಗಿನ ಕಾಲಕ್ಕೆ ಒಂದು ಅಚ್ಚರಿ. ಅವ್ರ ಸಾಹಿತ್ಯ ಕೃಷಿ ಅಪಾರ. ಸಮಾಜಶಾಸ್ತ್ರ ಅವ್ರ ನೆಚ್ಚಿನ ವಿಷಯವಾದರೂ ಕಥೆ, ಕವನ, ಪ್ರಬಂಧಗಳಲ್ಲೂ ಅವ್ರು ಸಿದ್ಧ ಹಸ್ತರು ಎಂಬುದಕ್ಕೆ ಅವ್ರ ಹತ್ತಾರು ಕೃತಿಗಳು ಉದಾಹರಣೆ... ಇದೇ ಗ್ರಾಮದಲ್ಲಿ ಸ್ಥಾಪಿಸಿರುವ ಮರುಳಸಿದ್ದಯ್ಯನವರ ಕನಸಿನ ಕೂಸು ಸ್ವಸ್ಥಿ ಎಂಬ ಸಮಾಜಸೇವಾ ಸಂಸ್ಥೆ ಎಲೆ ಮರೆ ಕಾಯಿಯಂತೆ ತನ್ನ ಸೇವೆಯಲ್ಲಿ ತೊಡಗಿದೆ. ವಿದೇಶಗಳ ವಿದ್ಯಾರ್ಥಿಗಳು ಹಿರೇ ಕುಂಬಳಗುಂಟೆಗೆ ಬಂದು ಅಧ್ಯಯನ ನಡೆಸಿದ್ದಾರೆ. ಇವ್ರ ಪುಸ್ತಕಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿವೆ...
ಡಾ. ಹೆಚ್.ಎಂ. ಮರುಳಸಿದ್ದಯ್ಯ

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಾನು ಹುಟ್ಟಿ ಬೆಳೆದ ಪರಿಸರವನ್ನು ಮರೆಯಬಾರದು ಎನ್ನುವ ಮಾತಿಗೆ ಮರುಳಸಿದ್ದಯ್ಯ ಅವ್ರು ಆದರ್ಶ. ತಮ್ಮ ಮನೆಯ ಜಾಗವನ್ನು ಸಮಾಜಕ್ಕಾಗಿ ಅದರಲ್ಲೂ ಪುಸ್ತಕ ಮನೆ ನಿರ್ಮಿಸಲು ನೀಡಿದ ಪ್ರೊಫೆಸರ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ...
- ಅಮೃತ ಕಿರಣ್ 

Thursday, December 25, 2014

ಮೈನಿಂಗ್ ಭೂತ ಬಲ್ಡೋಟಾ...!



ಮೈನಿಂಗ್ ಭೂತ  ಬಲ್ಡೋಟಾ...!




ಗಣಿಗಾರಿಕೆ ಅಂದ ತಕ್ಷಣ ನಮ್ಮ ಕಣ್ಣೆದುರಿಗೆ ಬರೋದು ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಚಿತ್ರ. ಇದಕ್ಕೆ ಕಾರಣ, ಅವ್ರ ಮೇಲೆ ಹಾಕಿರೋ ಥರಾವರಿ ಕೇಸುಗಳು, ಹಾಗೂ ಅವುಗಳನ್ನ ವೈಭವೀಕರಿಸಿರೋ ಮಾಧ್ಯಮಗಳು. ಆದರೆ ಅವ್ರ ವಿರುದ್ಧದ ಕೇಸುಗಳಿಂದ ಉಂಟಾಗಿರೋ ರಾಜಕೀಯ ತಲ್ಲಣಗಳ ಮಧ್ಯೆ, ಬಳ್ಳಾರಿಯನ್ನು ಅನೇಕ ವರ್ಷಗಳಿಂದ ಅಕ್ಷರಶಃ ತಮ್ಮ ಸ್ವಂತ ಜಾಗೀರಿನ ಹಾಗೆ ಬಳಸಿಕೊಂಡ ಇನ್ನೂ ಅನೇಕರ ಲೂಟಿ ಕಥೆಗಳು ಮರೆಯಾಗಿಹೋಗಿವೆ.  ಅಂಥ ಜನರ ಸಾಲಿನಲ್ಲಿ ಮೊದಲು ನಿಲ್ಲೋದು, ರಾಹುಲ್ ಬಲ್ದೋಟ. ಅವ್ರ ಬಗ್ಗೆ ಅದ್ಯಾಕೆ ತನಿಖಾ ಸಂಸ್ಥೆಗಳಿಗೆ, ರಾಜಕಾರಣಿಗಳಿಗೆ ಹಾಗೂ ಮಾಧ್ಯಮಗಳಿಗೆ ಜಾಣ ಕುರುಡು ಇದೆಯೋ ಗೊತ್ತಿಲ್ಲ. ಆದ್ರೆ, ಅವ್ರ ಜಾತಕವನ್ನ ಜಾಲಾಡ್ತಾ ಹೋದ್ರೆ ಹಲವು ಆಘಾತಕಾರಿ ಸಂಗತಿಗಳು ಬಿಚ್ಚಿಕೊಳ್ತಾ ಹೋಗ್ತವೆ. ಇದನ್ನ ತೆಹಲ್ಕಾ ಡಾಟ್​ ಕಾಮ್​ ಎಳೆಎಳೆಯಾಗಿ ಬಿಚ್ಚಿಟ್ಟಿದೆ.... ಬಲ್ಡೋಟಾ ಗ್ರೂಪ್ ಆಫ್​ ಕಂಪನೀಸ್ ಹೇಗೆ ವಿಷಸರ್ಪದಂತೆ ಮೈನಿಂಗ್ ದೈತ್ಯವಾಗಿ ಬೆಳೆದಿದೆ, ಹೇಗೆ ಪ್ರತಿ ಹಂತದಲ್ಲೂ ರೆಡ್ಡಿಯವರನ್ನ ಮಾತ್ರ ವಿಲನ್ ಮಾಡಿ ತಾನು ಊಸರವಳ್ಳಿಯ ಹಾಗೆ ಬಣ್ಣ ಬದಲಿಸ್ತಾ ಬಂದಿದೆ, ಯಾರ್ಯಾರ ಸಹಾಯದಿಂದೆಲ್ಲಾ ಅದು ಪಾರಾಗಿದೆ ಅನ್ನೋ ಎಲ್ಲ ವಿವರಗಳೂ ಅಲ್ಲಿವೆ. ಅವುಗಳನ್ನೇ ಬೆನ್ನತ್ತಿ ಹೋದ ಜನಶ್ರೀ ಟೀಮಿಗೂ ಅವುಗಳಿಗೆ ಸಂಬಂಧಪಟ್ಟ ಅನೇಕ ಶಾಕಿಂಗ್ ದಾಖಲೆಗಳು ಸಿಕ್ಕಿವೆ. ವಿಪರ್ಯಾಸ ಏನಂದ್ರೆ, ಬಲ್ಡೋಟಾ ಎಂಬ ಈ ವಂಚಕ ಕಂಪನಿಗೆ ಗಣಿಗಾರಿಕೆಗಾಗಿ ಕೊಡೋ 'ಪ್ರೆಸಿಡೆಂಟ್ಸ್ ನ್ಯಾಷನಲ್ ಸೇಫ್ಟಿ ಅವಾರ್ಡ್' ಕೂಡಾ ಸಿಕ್ಕಿದೆ ಈ ಸಲ ಅನ್ನೋದು..! ಪೊಲಿಟಿಲಕಲಿ ಈ ಬಲ್ದೋಟ ಅನ್ನೋ  ತಿಮಿಂಗಲ ಅದೆಷ್ಟು ಸ್ಟ್ರಾಂಗ್ ಇರಬಹುದು ಅನ್ನೋದ್ರ ಅಂದಾಜು ಸಿಗೋಕೆ ಇದೊಂದು ಸಾಕ್ಷಿ.
======================
ಬಳ್ಳಾರಿ ಖನಿಜ ಸಮೃದ್ಧ ಜಿಲ್ಲೆ.. ಒಂದೊಮ್ಮೆ ಮ್ಯಾಂಗನೀಸ್, ಮಗದೊಮ್ಮೆ ಕಬ್ಬಿಣದ ಅದಿರಿನಿಂದಾಗಿ ವಿಶ್ವ ಪ್ರಸಿದ್ದಿಯಾದ ಪ್ರದೇಶ...ಸಂಸ್ಕರಣೆಗೆ ವಿಪರೀತ ವೆಚ್ಚ ಆಗೋದ್ರಿಂದ ಬಳ್ಳಾರಿಯಲ್ಲಿ ಮ್ಯಾಂಗನೀಸ್ ಗಣಿಗಾರಿಕೆಯಿಂದ ಅಷ್ಟೊಂದು ಲಾಭ ಸಿಗ್ತಾ ಇರಲಿಲ್ಲ. ಆದ್ರೆ, ಅಲ್ಲಿ ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಅದಿರು ದಂಡಿದಂಡಿಯಾಗಿ ಸಿಗ್ತಾ ಇದೆ. ಬಳ್ಳಾರಿಯ ಕ್ವಾಲಿಟಿ ಅದಿರಿಗೆ ವಿಶ್ವಾದ್ಯಂತ ಭಾರೀ ಬೇಡಿಕೆಯಿದೆ. ಬೇಡಿಕೆಗೆ ಸರಿಸಮಾನವಾಗಿಯೇ ಜಿಲ್ಲೆಯಲ್ಲಿ ಇತ್ತೀಚಿನ ತನಕ ಅದಿರು ಗಣಿಗಾರಿಕೆ ಸ್ವಲ್ಪ ದೊಡ್ಡ ಮಟ್ಟದಲ್ಲೇ ನಡೀತಾ ಇತ್ತು.

ಕಬ್ಬಿಣದ ಅದಿರಿನ ಗಣಿಗಾರಿಕೆ ಅನ್ನೋದು ಬಳ್ಳಾರಿಗೆ ಇಂದು ನಿನ್ನೆಯದಲ್ಲ... ನಾಲ್ಕೈದು ದಶಗಳಿಂದಲೂ ಇಲ್ಲಿ ದೊಡ್ಡ ಮಟ್ಟದಲ್ಲೇ ಗಣಿಗಾರಿಕೆ ನಡೆಯುತ್ತಿದೆ. ಮೈನಿಂಗ್ ಮಾಫಿಯಾ ಅನ್ನೋದು ಅವತ್ತಿನಿಂದಲೇ ಈ ಜಿಲ್ಲೆಯಲ್ಲಿ ಭದ್ರವಾಗಿ ನೆಲೆಯೂರಿದೆ. ಅಕ್ರಮ ಗಣಿಗಾರಿಕೆ ಅನ್ನೋದು ಕೂಡಾ ಗಣಿಗಾರಿಕೆ ಅನ್ನೋದು ಬಳ್ಳಾರಿಯಲ್ಲಿ ಆರಂಭಗೊಂಡ ದಿನದಿಂದಲೂ ಇತ್ತು ಅಂದ್ರೆ, ಖಂಡಿತಾ ಉತ್ಪ್ರೇಕ್ಷೆ ಆಗಲಿಕ್ಕಿಲ್ಲ..ಆದ್ರೆ, ಬಳ್ಳಾರಿ ಗಣಿಗಾರಿಕೆ ಅಂದಾಗ ಅಕ್ರಮದ ಕಳಂಕ ಅಂಟಿಸಿದ್ದು, ತನಿಖೆಯ ಶೂಲಕ್ಕೆ ಸಿಲುಕಿಸಿದ್ದು, ಜಿದ್ದಿಗೆ ಬಿದ್ದವರಂತೆ ಜೈಲಿಗೆ ಅಟ್ಟಿ, ಅಲ್ಲೇ ಉಳಿಯುವಂತೆ ಮಾಡಿಸಿದ್ದು, ಮಾಜಿ ಸಚಿವ ಜನಾರ್ದನ ರೆಡ್ಡಿಯವರನ್ನು ಮಾತ್ರ.  (ಆದರೆ ಇವೆಲ್ಲವನ್ನೂ)
ಇದಕ್ಕೂ ಮೀರಿದ ಗಣಿ ಕರ್ಮಕಾಂಡವೊಂದು ಬಳ್ಳಾರಿಯಲ್ಲಿ ಇದೆಯಾ..? 
ಇದು ಕೋತಿ ಬೆಣ್ಣೆ ತಿಂದು ಮೇಕೆ ಮೂತಿಗೆ ಒರೆಸಿದ ಕಥೆಯಾ..? 
ಬಹಳಷ್ಟು ಜನರಿಗೆ ಗೊತ್ತಿರದ ಆ ಕಥೆಯ ಕಥಾ ನಾಯಕ ಯಾರು.? 

ಬಳ್ಳಾರಿ ಗಣಿಗಾರಿಕೆಯ ಕಳಂಕದಲ್ಲಿ ಓಬ್ಬರೇ ವ್ಯಕ್ತಿಯನ್ನು ಮಾತ್ರ ಇನ್ನಿಲ್ಲದಂತೆ ದೋಷಿ ರೂಪದಲ್ಲಿ ಚಿತ್ರಿಸಲಾಗುತ್ತಿದೆ. ಆದ್ರೆ, ಅದಕ್ಕೂ ಮುನ್ನ ಸುಮಾರು 50 ವರ್ಷ ಗಣಿಗಾರಿಕೆ ನಡೆಸಿದ, ಈಗಲೂ ನಡೆಸುತ್ತಿರುವ, ಚೀನಾ ಒಲಿಂಪಿಕ್ಸ್ ಸಮಯದಲ್ಲಾದ ಬೂಮ್ ಸಂದರ್ಭದಲ್ಲಿ ಚೀನಾಗೆ ಅತಿ ಹೆಚ್ಚು ಬಳ್ಳಾರಿ ಅದಿರು ರಫ್ತು ಮಾಡಿ ಕೋಟಿಗಳನ್ನು ಚಿಲ್ಲರೆ ಥರ ಎಣಿಸಿಕೊಂಡ ಕಂಪನಿಯೊಂದರ ಹೂರಣ ಇದುವರೆಗೂ ಬಯಲಾಗಿಲ್ಲ.. ಅದು ಅಷ್ಟು ಸುಲಭದಲ್ಲಿ ಬೆತ್ತಲಾಗುವ ಸಾಧಾರಣ ಕಂಪನಿಯೂ ಅಲ್ಲ..ವ್ಯವಸ್ಥಿತವಾಗಿ ಎಲ್ಲವನ್ನೂ ಮ್ಯಾನೇಜ್ ಮಾಡುವ ಶಕ್ತಿ ಅದಕ್ಕಿದೆ..

ಇವೆಲ್ಲವನ್ನೂ ಹೇಳುವ ವಿಸ್ತೃತ ತನಿಖಾ ವರದಿಯನ್ನು ತೆಹಲ್ಕಾ ಪತ್ರಿಕೆ ಇತ್ತೀಚೆಗೆ ಪ್ರಕಟಿಸಿದೆ. A missing link in the mining scam..?..ಅನ್ನೋ ಶೀರ್ಷಿಕೆಯಡಿ ಈ ವರದಿ ಪ್ರಕಟವಾಗಿದೆ. ಬಳ್ಳಾರಿ ಗಣಿಗಾರಿಕೆಯ ಮಿಸ್ಸಿಂಗ್ ಲಿಂಕ್ ಯಾವುದು.. ಅಕ್ರಮ ನಡೆಸಿಯೂ ಸಿಕ್ಕಿ ಬೀಳದಷ್ಟು ಚಾಣಾಕ್ಷ ನಡೆ ತೋರಿದ ಆ ಉದ್ಯಮಿ ಯಾರು..ಅವೆಲ್ಲಾ ಹೇಗೆ ಸಾಧ್ಯವಾಯ್ತು ಅನ್ನೋದು ಆ ವರದಿಯಲ್ಲಿದೆ.  ಅಲ್ಲಿ ಪ್ರಸ್ತಾಪಿಸಲಾದ ಆ ಕಂಪನಿ  ಮತ್ತೆ ಯಾರದ್ದೂ ಅಲ್ಲ.. ಅದು ದಿ ಬಲ್ಡೋಟಾ ಗ್ರೂಪ್ .. ಆ ಗ್ರೂಪ್​ನಲ್ಲಿ ಮುಖ್ಯವಾಗಿ ಕಾಣಿಸುವುದು ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಹುಲ್ ಬಲ್ಡೋಟ...

ಹಿಂದೊಂದು ಸಲ ಜನಾರ್ದನ ರೆಡ್ಡಿ ಈ ರಾಹುಲ್ ಬಲ್ಡೋಟನನ್ನೆ ಗಣಿ ವೀರಪ್ಪನ್ ಅಂತ ಕರೆದಿದ್ದರು ಅನ್ನೋದನ್ನ ಮರೆಯೋ ಹಾಗಿಲ್ಲ. ಅದನ್ನವರು ಹೇಳಿದ್ದು ರಾಜ್ಯದ ವಿಧಾನ ಪರಿಷತ್ತಿನಲ್ಲಿ. ಆದರೆ, ಯಾಕೋ ಅವತ್ತು ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯವರಾಗಲೀ, ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಯಾರೂ ಆ ಮಾತುಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ. ಗಣಿ ಉದ್ಯಮವನ್ನು ಆದ್ಯಂತವಾಗಿ ಅರ್ಥಮಾಡಿಕೊಂಡಿರುವವರೊಬ್ಬರ ಬಾಯಿಂದ ಬಂದ ಈ ಮಾತುಗಳು ಸತ್ಯವಿರಬಹುದು ಅಂತಲೂ ಯಾರಿಗೂ ಅನ್ನಿಸಿರಲೇ ಇಲ್ಲ. ಯಾರ್ಯಾರದ್ದೋ ಮಾತ್ಯಾಕೆ ಬಿಡಿ; ಅದಾದ ಒಂದೆರಡು ವರ್ಷಗಳ ನಂತರ, ಅಕ್ರಮ ಗಣಿಗಾರಿಕೆಯನ್ನು ಬುಡಸಮೇತ ಶೋಧಿಸಿಬಿಡುತ್ತೇವೆ ಅಂತ ಹೊರಟ ಲೋಕಾಯುಕ್ತ ಸಂಸ್ಥೆ ಕೂಡ ಜನಾರ್ದನ ರೆಡ್ಡಿಯವರಿಂದ ಈ `ಗಣಿ ವೀರಪ್ಪನ್` ಅನ್ನೋ ಬಿರುದು ಪಡೆದ ವ್ಯಕ್ತಿಯ ಜಾತಕಾನ ಜಾಲಾಡೋಕೆ  ಹೋಗಲೇ ಇಲ್ಲ. ಅದೇ ಇವತ್ತಿಗೂ ಯಾರಿಗೂ ಅರ್ಥವಾಗದ ನಿಗೂಢ.

ಅದೇನೇ ಇರಲಿ; ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಅನ್ನೋ ಮಾತು ಸುಳ್ಳಲ್ಲ. ಹಾಗಾಗಿ, ಬಲ್ದೋಟ ಕಂಪನಿಯ ಅವ್ಯವಹಾರಗಳೂ ಇದೀಗ ಬಯಲಾಗಿವೆ. ಲೋಕಾಯುಕ್ತ ಸಂಸ್ಥೆಯಾಗಲೀ, ಹಿರೇಮಠ್ ಅವರ ಸಮಾಜ ಪರಿವರ್ತನಾ ಸಮುದಾಯವಾಗಲೀ ಕೈಹಾಕಿ ಕೆದಕದಿದ್ದರೂ ಕೂಡ, ಈ ರಾಹುಲ್ ಬಲ್ಡೋಟಾ ಕಂಪನಿಯ ಅಕ್ರಮಗಳ ಅಧಿಕೃತ ಪುರಾವೆಗಳು ಸುಪ್ರೀಂ ಕೋರ್ಟ್​ ನೇಮಿಸಿರುವ ಸಿಇಸಿ ಎದುರು ಬಂದು ಬಿದ್ದಿವೆ. ತುಂಬಾ ಜತನದಿಂದ ಒಂದೊಂದು ವಿವರವನ್ನೂ ಹೆಕ್ಕಿ ತೆಗೆಯುವ ಈ ಕೆಲಸ ಮಾಡಿದ್ದು ಹೊಸಪೇಟೆಯ  ಕರ್ನಾಟಕ ಪರಿಸರ ಸಂರಕ್ಷಣಾ ಸಮಿತಿ..ಒಟ್ಟಾರೆ, ಬಲ್ಡೋಟಾ ಅಕ್ರಮ ಗಣಿಗಾರಿಕೆಗೆ ಬೇಕಾದ ಸಾಕ್ಷ್ಯಗಳೆಲ್ಲಾ ಈಗ ಸಿಇಸಿ ಮುಂದಿದೆ. ಆದರೂ ಯಾಕೆ ಸಿಇಸಿ ನಿಧಾನವಾಗಿದೆ ಅನ್ನೋದು, ಮತ್ತು ಯಾಕೆ ತನಿಖಾ ಸಂಸ್ಥೆಗಳು ಮಗುಮ್ಮಾಗಿ ಕೂತಿವೆ ಅನ್ನೋದು ಮನುಷ್ಯ ಮಾತ್ರರಿಗೆ ಅರ್ಥವಾಗದ ರಹಸ್ಯ.

ಇಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವುದು ಎಂಎಸ್​ಪಿಲ್ ಹಾಗೂ ಆರ್​ ಎಂಎಂಪಿಲ್ ಅನ್ನೋ ಎರಡು ಕಂಪನಿಗಳು.. ಈ ಎರಡೂ ಕಂಪನಿ ಬಲ್ಡೋಟಾ ಗ್ರೂಪ್​ಗೆ ಸೇರಿದ್ದು.

MSPL. ಅಂದ್ರೆ ಮಿನರಲ್ಸ್ ಸೇಲ್ಸ್ ಪ್ರೈವೇಟ್ ಲಿಮಿಟೆಡ್. ದೇಶದ ಅತಿ ದೊಡ್ಡ ಮೈನಿಂಗ್ ಕಂಪೆನಿ. ರಾಜ್ಯದಲ್ಲೂ ಸಾಕಷ್ಟು ಪ್ರಾಬಲ್ಯ ಹೊಂದಿದೆ. ನಮ್ಮಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದರ ಮೈನಿಂಗ್ ಬಾಹುಗಳಿವೆ.  MSPL ಕೇವಲ ಕಬ್ಬಿಣದ ಅದಿರು ಗಣಿಗಾರಿಕೆಯನ್ನಷ್ಟೇ ಮಾಡೋದಿಲ್ಲ.  ಶಿಪ್ಪಿಂಗ್, ಸ್ಟೀಲ್​, ಕೆಮಿಕಲ್ಸ್, ವಿಂಡ್ ಎನರ್ಜಿ, ಡೈಮಂಡ್ ಮತ್ತು ಗೋಲ್ಡ್ ಮೈನಿಂಗ್​ನಂತಹ ಉದ್ಯಮಗಳನ್ನೂ ನಡೆಸ್ತಾ ಇದೆ. ಕರ್ನಾಟಕದಲ್ಲಿ ಈ ಗ್ರೂಪ್​ ಆಫ್​ ಕಂಪನೀಸ್ನ ಮೈನಿಂಗ ಇತಿಹಾಸಕ್ಕೆ ಈಗಾಗಲೇ ನಾಲ್ಕು ದಶಕಗಳಾಗಿ  ಹೋಗಿವೆ. ​ ಅಂದರೆ, ಹೆಚ್ಚು ಕಡಿಮೆ ಜನಾರ್ದನ ರೆಡ್ಡಿಯವರು ಹುಟ್ಟೋದಿಕ್ಕೂ ಮುಂಚಿನಿಂದಲೇ ಗಣಿ ಅಗೆದು ದುಡ್ಡು ಬಗೆದುಕೊಳ್ತಿರೋ  ಕಂಪನಿ ಅದು.  ಮೈನಿಂಗ್​ ಬ್ಯುಸಿನೆಸ್​ನ ಎಲ್ಲಾ ಟ್ರಿಕ್​ಗಳೂ ಎಂಎಸ್​ಪಿಎಲ್ಗೆ ಕರತಲಾಮಲಕ... ಚೀನಾಕ್ಕೆ ಉತ್ಕೃಷ್ಟ ಅದಿರನ್ನು ರಫ್ತು ಮಾಡುವ ಪ್ರಮುಖ ಕಂಪೆನಿಯೇ MSPL. ಹಾಗಂತ ಆ ಕಂಪನಿಯ ವೆಬ್​ಸೈಟಿನಲ್ಲೇ ಇದೆ.

ಈ ದೈತ್ಯ MSPL ಕಂಪೆನಿಯ ಈಗಿನ ಚೇರ್​ಮನ್ ನರೇಂದ್ರ ಬಲ್ಡೊಟಾ.. ಅವ್ರ ಮಕ್ಕಳಾದ ರಾಹುಲ್ ಬಲ್ಡೋಟಾ ಹಾಗೂ ಶ್ರೇಣಿಕ್​ಕುಮಾರ್ ಬಲ್ಡೋಟಾ ಎಕ್ಸಿಕ್ಯೂಟಿವ್ ಡೈರೆಕ್ಟರ್ಸ್​. ನರೇಂದ್ರ ಬಲ್ಡೋಟಾ, FEMIದ ಅಧ್ಯಕ್ಷರು ಕೂಡಾ ಆಗಿದ್ರು. ಫೆಮಿ ಅಂದ್ರೆ, ಫೆಡರೇಷನ್ ಆಫ್​ ಮಿನರಲ್ ಇಂಡಸ್ಟ್ರೀಸ್​. ಐದು ವರ್ಷಗಳಿಂದ ಈ ಸ್ಥಾನದಲ್ಲಿದ್ದ ನರೇಂದ್ರ ಬಲ್ಡೋಟಾ, ಅತಿ ದೊಡ್ಡ ಲಾಬಿಯಿಸ್ಟ್​ ಆಗಿ ಬೆಳೆದ್ರು. ಭಾರತ ಸರ್ಕಾರ ಹಾಗೆಯೇ ಕರ್ನಾಟಕ ಸರ್ಕಾರಗಳಲ್ಲಿ ಯಾವುದೇ ಕೆಲಸವನ್ನೂ ಸಲೀಸಾಗಿ ಮಾಡಿಸಿಕೊಳ್ಳುವ ತಾಕತ್ತು ಅವರದ್ದು... ಇನ್ನು, ಇವ್ರ ಮಗ ರಾಹುಲ್ ಬಲ್ಡೋಟಾ ಈಗಿನ FEMI ಅಧ್ಯಕ್ಷರು. ಅಪ್ಪನಂತೆಯೇ ಮಗ..

ರಾಹುಲ್ ಬಲ್ಡೋಟಾ ಅಪ್ಪ ನರೇಂದ್ರ ಬಲ್ಡೊಟಾ ಸುಮಾರು 40 ವರ್ಷಗಳಿಂದ ಗಣಿ ಉದ್ಯಮದಲ್ಲಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಇವರ ಕಾರ್ಯಕ್ಷೇತ್ರ. ಸುತ್ತಮುತ್ತಲ ಸಾವಿರಾರು ಎಕರೆ ಭೂಮಿಯಲ್ಲಿ ಗಣಿಗಾರಿಕೆ ನಡೆಸಿದ್ದಾರೆ.. ನಡೆಸುತ್ತಿದ್ದಾರೆ.. ಗಣಿಗಾರಿಕೆಗೆ ಅನುಮತಿ ಪಡೆದು, ಸುತ್ತಲಿನ ಅರಣ್ಯವನ್ನು ಒತ್ತುವರಿ, ಅಕ್ರಮ ಗಣಿಗಾರಿಕೆ, ಪರಿಸರ ನಾಶ, ಅರಣ್ಯ ಸಂರಕ್ಷಣಾ ಕಾಯಿದೆಯ ಉಲ್ಲಂಘನೆ ಮುಂತಾದ ಗುರುತರ ಆರೋಪ, ಎಂಎಸ್​ಪಿಎಲ್ ಮೇಲಿದೆ.

MSPL ಅಂಗಸಂಸ್ಥೆಯೇ RMMPL - ಅಂದ್ರೆ ರಾಮಗಡ ಮಿನರಲ್ಸ್​  ಅಂಡ್ ಮೈನಿಂಗ್ ಪ್ರವೇಟ್ ಲಿಮಿಟೆಡ್​. ಈ ಕಂಪನಿ ಅಕ್ರಮದ ವಿಚಾರದಲ್ಲಿ MSPLನ್ನೂ ಮೀರಿಸುವಂಥದ್ದು.   ಇದ್ರ ಮೇಲೂ ಕಾನೂನು ಉಲ್ಲಂಘನೆ ಆರೋಪಗಳಿವೆ. ಈ ಎಂಎಸ್​ಪಿಎಲ್ ಹಾಗೂ ಆರ್​ ಎಂಎಂಪಿಎಲ್ ಕಂಪನಿ ಬೆಣ್ಣೆ ತಿಂದು ಇನ್ನೊಬ್ಬರ ಮೂತಿಗೆ ಒರೆಸಿದ ವಿಚಾರ, ಅಷ್ಟು ಸರಳವಾಗಿಲ್ಲ..  ಆದ್ರೆ ಇದಾವುದೂ ಇವತ್ತಿಗೂ ಯಾರ ಕಣ್ಣಿಗೂ ಬಿದ್ದಿಲ್ಲ.. ಬಿದ್ರೂ ಬೀಳದಂತೆ ನೋಡಿಕೊಳ್ಳಲಾಗ್ತಿದೆ.... ಇದೊಂದು ವ್ಯವಸ್ಥಿತ ಜಾಲ...ಆ ಜಾಲದ ಡೀಟೆಲ್ಸ್ ಈಗ ಸಿಇಸಿ ಮುಂದಿದೆ. ಅದು ಜನಶ್ರೀಗೂ ಸಿಕ್ಕಿದೆ.
===========================
ಇಷ್ಟೊಂದು ಅಕ್ರಮದ ಆರೋಪ ಇದ್ರೂ, ಬಲ್ಡೋಟಾ ಗ್ರೂಪ್​ಗೆ  ಗಣಿಗಾರಿಕೆಗಾಗಿ ನೀಡುವ 'ಪ್ರೆಸಿಡೆಂಟ್ಸ್ ನ್ಯಾಷನಲ್ ಸೇಫ್ಟಿ ಅವಾರ್ಡ್' ಹೇಗೆ ಸಿಕ್ತು ಅನ್ನೋದು ದೊಡ್ಡ ಮಿಸ್ಟರಿ.. ಇಲ್ಲೂ ಬಲ್ಡೋಟಾ ಲಾಬಿ ನಡೆದಿರಬಹುದೆಂಬ ಅನುಮಾನ ವಿದೆ. ಅದು ಹಾಗಿರ್ಲಿ. ಬಲ್ಡೋಟಾ ಕಂಪನಿ ಅಕ್ರಮಗಳ ಫುಲ್​ ಡೀಟೆಲ್ಸ್​ ಕೊಡ್ತೇವೆ.. ಅದಕ್ಕೂ ಮೊದಲು ಒಂದುಬ್ರೇಕ್
___________________________________________________________________________________________________________________________________



ಮೊದಲೇ ನಾನು ಹೇಳಿದ್ಹಾಗೆ, ಈ ಬಲ್ಡೋಟಾ, ಅಕ್ರಮ ಮಾಡಿ ಧಕ್ಕಿಸಿಕೊಳ್ಳೋ ಅಸಾಮಿ.. ಅಷ್ಟೊಂದು ಪ್ರಭಾವ ಅವರಿಗೆ ಕೇಂದ್ರ ಮತ್ತು ರಾಜ್ಯಗಳೆರಡರ ಮೇಲೂ ಇವೆ. ಬಲ್ಡೊಟಾ ಕಂಪನಿಗಳು ಬಳ್ಳಾರಿ ಜಿಲ್ಲೆಯ
ವ್ಯಾಸನಕೆರೆ ಹಾಗೂ ರಾಮಗುಡ್ಡದಲ್ಲಿ ನಡೆಸಿದ ಅಕ್ರಮಗಳು ಒಂದೆರಡಲ್ಲ... ನಿರಂತರವಾಗಿ ನಾಲ್ಕು ದಶಕಗಳ ಕಾಲ ಇಲ್ಲಿ ಭೂಮಿಯ ಮೇಲೆ ಅತ್ಯಾಚಾರ ನಡೆದಿದೆ... ವಿಶೇಷ ಅಂದ್ರೆ ಎಲ್ಲವೂ ಗುಪ್ತ್​ ಗುಪ್ತ್​...
=====================
ನಂ.1. ವ್ಯಾಸನಕೆರೆ ವಿಲೇಜ್ - ಲೀಸ್ ನಂಬರ್ 1801

ಹೊಸಪೇಟೆ ಪಟ್ಟಣದ ಸಮೀಪದಲ್ಲಿರುವ ಪುಟ್ಟ ಗ್ರಾಮವೇ ವ್ಯಾಸನಕೆರೆ. ಒಂದು ಕಾಲದಲ್ಲಿ ಇದು ಹಚ್ಚ ಹಸಿರಿನ ದಟ್ಟ ಕಾನನ. ಯಾವಾಗ ಇಲ್ಲಿನ ನೆಲದಲ್ಲಿ ಕಪ್ಪು ಚಿನ್ನ ಇದೆ ಅಂತಾ ತಿಳೀತೋ ಇಲ್ಲಿಗೆ ಮೊದಲು ಲಗ್ಗೆ ಇಟ್ಟದ್ದೇ ಬಲ್ಟೋಟಾ... ಈ ಗ್ರಾಮದಲ್ಲಿ  ಒಟ್ಟು 4 ಕಡೆಗಳಲ್ಲಿ ಗಣಿಗಾರಿಕೆ ನಡೆಸಲು ಬಲ್ಡೊಟಾ ಕಂಪನಿ ಅನುಮತಿ ಪಡೆದಿದೆ.
ಸರ್ವೇ ನಂಬರ್ 1, 4, 5 ಮತ್ತು 6ರಲ್ಲಿ ಮೈನಿಂಗ್ ಲೀಸ್ ಪಡೆದಿದೆ. ಆದ್ರೆ ವ್ಯಾಸನಕೆರೆ ಗ್ರಾಮದ ಗಣಿ ಲೀಸ್ ಮೂಲತಃ MSPLಗೆ ಸೇರಿದ್ದಲ್ಲ. 1952ರಲ್ಲಿ ಬಳ್ಳಾರಿಯ ಲೇಟ್ ಕೆ. ನಾರಾಯಣಯ್ಯ ಅನ್ನೋರು ಈ 858 ಎಕರೆ ಗಣಿ ಪ್ರದೇಶದ ಗುತ್ತಿಗೆ ಪಡೆದಿದ್ರು, ಅದೂ ಕೇವಲ 10 ವರ್ಷಕ್ಕೆ. ನಂತ್ರ 19-04-1962ರಲ್ಲಿ MSPLಗೆ ಈ ಗುತ್ತಿಗೆ ವರ್ಗಾವಣೆಯಾಯ್ತು. 14-11-1962ರಿಂದ ಕಾರ್ಯಗತವಾಗುವಂತೆ 20 ವರ್ಷಗಳಿಗೆ ಗುತ್ತಿಗೆ ನವೀಕರಣವೂ ಆಯ್ತು. ಹಾಗೆಯೇ 14-1-1982ರಂದು 2ನೇ ಬಾರಿಗೆ ಮತ್ತೆ 20 ವರ್ಷಗಳಿಗೆ ನವೀಕರಣಗೊಂಡಿತು. ನಂತ್ರ 09-06-2003ರಲ್ಲಿ ಮೂರನೇ ಸರ್ತಿ 20 ವರ್ಷಗಳಿಗೆ ನವೀಕರಣಗೊಂಡಿತು. ಮೂರು ಬಾರಿ ನವೀಕರಣಗೊಂಡಾಗಲೂ 858 ಎಕರೆಯಲ್ಲಿ ಮಾತ್ರ ಗಣಿಗಾರಿಕೆಗೆ ಅನುಮತಿ ನೀಡಲಾಗಿತ್ತು. ಆದ್ರೆ MSPL ಒಟ್ಟು 1015 ಎಕರೆಯಲ್ಲಿ  ರಾಜಾರೋಷವಾಗಿ ಗಣಿಗಾರಿಕೆ ನಡೆಸಿದೆ.. ಅಂದ್ರೆ ಪಕ್ಕದ ಮೀಸಲು ಅರಣ್ಯವನ್ನ ಒತ್ತುವರಿ ಮಾಡಿಕೊಂಡು ಅದಿರು ಲೂಟಿ ನಡೆದಿದೆ...ಇಲ್ಲಿ ಬಲ್ಡೋಟಾ ಕಡೆಯಿಂದ ಸುಮಾರು 200 ಎಕರೆ ಅರಣ್ಯ ಒತ್ತುವರಿ ಆಗಿದೆ. ತುರ್ತಾಗಿ ನೋಡಿ ಸರ್ವೇ ಮಾಡಿ  ಅಂತಾ ಅಂದಿನ ಬಳ್ಳಾರಿ ಅರಣ್ಯ ಸಂರಕ್ಷಣಾಧಿಕಾರಿಯವ್ರು ಅಂದಿನ ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುತ್ತಯ್ಯ ಅವರಿಗೆ ಸೆಪ್ಟೆಂಬರ್​ 29, 2009ರಂದೇ ಪತ್ರ ಬರೆದಿದ್ದರು. (ದಾಖಲೆ ಪೇಜ್ 77)

ಈ ಸಂಬಂಧ ದೂರು ಹಾಗೂ ದಾಖಲೆಗಳನ್ನು ಸಿಇಸಿಗೆ ಸಲ್ಲಿಸಲಾಗಿದೆ.

1962ನೇ ಇಸ್ವಿಯಿಂದ ಇವತ್ತಿನ ತನಕವೂ ಲೀಸ್ ಪಡೆದ ಜಾಗದಲ್ಲಷ್ಟೇ ಅಲ್ದೇ ಒತ್ತುವರಿ ಮಾಡಿದ ಪ್ರದೇಶದಲ್ಲೂ ಅವ್ಯಾಹತವಾಗಿ ಅಕ್ರಮವಾಗಿ ಗಣಿಗಾರಿಕೆ ನಡೆದಿದೆ... ವ್ಯಾಸನಕೆರೆ ಗ್ರಾಮದಲ್ಲಿ ಲೀಸ್ ಪಡೆದ ಪ್ರದೇಶದ ಪೂರ್ವ ದಿಕ್ಕಿನಲ್ಲಿ ಅರಣ್ಯ ಒತ್ತುವರಿಯಾಗಿದ್ದು, ಇದು ಅರಣ್ಯ ಸಂರಕ್ಷಣ ಕಾಯ್ದೆ 1980ರ ಉಲ್ಲಂಘನೆಯಾಗಿದೆ...

ಸರ್ವೆ ಮಾಡಲು ನಿರ್ದೇಶನವಿದ್ದರೂ  ಸರ್ವೇ ಮಾಡಲು ಅಧಿಕಾರಿಗಳಿಗೆ ಬಲ್ಡೋಟಾ ಕಂಪೆನಿ ಅವಕಾಶವನ್ನೇ ಕೊಟ್ಟಿಲ್ಲ ಅನ್ನೋದು ಇನ್ನೊಂದು ಗಮನಾರ್ಹ ವಿಷಯ... ಇದಕ್ಕೆ ಮೈನ್ಸ್ ಅಂಡ್ ಜಿಯಾಲಜಿ ಡಿಪಾರ್ಟ್​ಮೆಂಟ್​ಗೆ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥ ಡಾ. ಯು.ವಿ. ಸಿಂಗ್ ಬರೆದಿದ್ದ ಪತ್ರವೇ ಸಾಕ್ಷಿ... ವ್ಯಾಸನಕೆರೆ ಸರ್ವೇ ನಂಬರ್ 1 ಹಾಗೂ ಕಲ್ಲಹಳ್ಳಿ ಸರ್ವೇ ನಂಬರ್ 97ರ ಮಧ್ಯೆ ಗಡಿಯನ್ನು ಗುರುತಿಸುವ ಯಾವುದೇ ಕುರುಹು ಇಲ್ಲ ಎಂದು ಯು.ವಿ.ಸಿಂಗ್ ದಾಖಲಿಸಿದ್ದಾರೆ....

ಗಣಿಗಾರಿಕೆ ಗಡಿ ಗುರುತಿಸುವ ಕಲ್ಲುಗಳನ್ನು ಬಲ್ಡೋಟಾ ಕಂಪನಿ ಕಿತ್ತೆಸೆದಿದೆ... ಅಲ್ದೇ ವ್ಯಾಸನಕೆರೆ ಗ್ರಾಮದ ಗಡಿ ಗುರುತಿಸುವ ಕಲ್ಲನ್ನೂ ಸಹ ಕಿತ್ತು ಪಕ್ಕದ ಕಲ್ಲಹಳ್ಳಿ ಗ್ರಾಮದಲ್ಲಿ ನಡೆಲಾಗಿದೆ... ಅಂದ್ರೆ ಕಲ್ಲಹಳ್ಳಿ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನ ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಲಾಗಿದೆ. ಫಾರೆಸ್ಟ್ ಕನ್ಸರ್ವೇಶನ್ ಆಕ್ಟ್ ಪ್ರಕಾರ ಅರಣ್ಯ ಇಲಾಖೆಯ ಕ್ಲಿಯರೆನ್ಸ್​ ಕೂಡಾ ಪಡೆಯದೆ ಅವ್ಯಾಹತವಾಗಿ ಗಣಿ ಲೂಟಿ ಮಾಡಲಾಗಿದೆ... ಇಲ್ಲಿ ಒತ್ತುವರಿಯಾಗಿರೋದು ಒಂದೆರಡು ಎಕರೆಯಲ್ಲ... ಬರೋಬ್ಬರಿ 200 ಎಕರೆ. ಅರಣ್ಯ ಒತ್ತುವರಿ ಮಾಡಿರುವುದು MMRD ಆಕ್ಟ್ ಹಾಗೂ ಫಾರೆಸ್ಟ್ ಕನ್ಸರ್ವೇಶನ್ ಆಯ್ಟ್ ಗಳ ಸ್ಪಷ್ಟ ಉಲ್ಲಂಘನೆ. ಹೀಗಾಗಿ ರಾಜ್ಯದ ಬೊಕ್ಕಸಕ್ಕೆ ಸಹಜವಾಗಿಯೇ ನಷ್ಟ ಆಗಿದೆ...

MSPLನ ಎಷ್ಟೇ ಒತ್ತಡವಿದ್ರೂ ಪಟ್ಟು ಬಿಡದ ಜಿಲ್ಲಾ ಅರಣ್ಯಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು 16-07-2010ರಲ್ಲಿ ಪ್ರಾಥಮಿಕ ಸರ್ವೇಗೆ ಮುಂದಾದ್ರು. ಆದ್ರೆ ತಮ್ಮ ವ್ಯಾಸನಕೆರೆ ಗಣಿ ಪ್ರದೇಶದಲ್ಲಿ ಕಾಲಿಡೋದಿಕ್ಕೂ ಕೂಡಾ ಅಧಿಕಾರಿಗಳಿಗೆ MSPL ಅವಕಾಶ ಕೊಡಲಿಲ್ಲ... ಆದ್ರೂ,  MSPL ಲೀಸ್ ಪಡೆದಿದ್ದ ಜಾಗ ಹಾಗೂ ಫಾರೆಸ್ಟ್ ಲ್ಯಾಂಡ್ನ​ ನಕ್ಷೆಗಳನ್ನ ತೂಗಿ ನೋಡಿದರೆ ಸಾಕು, 200 ಎಕರೆ ಸ್ವಾಧೀನವಾಗಿರುವುದು ಸ್ಪಷ್ಟವಾಗಿ ಗೊತ್ತಾಗಿಬಿಡತ್ತೆ.

ಇದು ಒಂದು ರೀತಿಯ ಅಕ್ರಮವಾದ್ರೆ, ಮಿನರಲ್ ವೇಸ್ಟ್​ ಡಂಪ್ ಮಾಡಲು ಅರಣ್ಯದ ಜಾಗವನ್ನ ಕಬಳಿಕೆ ಮಾಡಿದ್ದು ಮತ್ತೊಂದು ಅಕ್ರಮ. ಇದನ್ನ ಅರಣ್ಯಾಧಿಕಾರಿಗಳು 14-12-2008ರಲ್ಲಿ ದಾಖಲಿಸಿದ್ರು... ವೇಸ್ಟ್ ಡಂಪಿಂಗ್ ಯಾರ್ಡ್​ ಆಗಿ ಕಲ್ಲಹಳ್ಳಿಗೆ ಹೊಂದಿಕೊಂಡ 20.53 ಅರಣ್ಯ ಪ್ರದೇಶವನ್ನ ಬಳಸಿಕೊಂಡದ್ದು, ಮೈನಿಂಗ್ ಲೀಸ್ ಒಪ್ಪಂದದ ಉಲ್ಲಂಘನೆಯಾಗಿತ್ತು. 2 ವಾರದೊಳಗೆ ಅದನ್ನು ತೆರವುಗೊಳಿಸಬೇಕು ಅಂತ ಡೆಪ್ಯುಟಿ ಕನ್ಸರ್ವೇಟರ್ 19-12-2007ರಂದು ಆದೇಶ ಕೂಡಾ ಕೊಟ್ಟಿದ್ದ್ರು.

MSPL ಬರೇ ಇಷ್ಟಕ್ಕೇ ಸುಮ್ಮನಾಗ್ಲಿಲ್ಲ. ಅವ್ಯಾಹತ ಗಣಿಗಾರಿಕೆಯಿಂದ ಉತ್ಪನ್ನವಾದ ಲಕ್ಷ ಲಕ್ಷ ಟನ್ ಕಬ್ಬಿಣದ ಅದಿರನ್ನ ಸಂಗ್ರಹಿಸಲು ಒಂದು ಜಾಗಬೇಕಿತ್ತು. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶ ಮೇಲೆ ಈ ದುರುಳ ಕಂಪೆನಿಯ ಕಣ್ಣು ಬಿತ್ತು.. ಅಲ್ಲಿವರೆಗೆ ಜನರ ಕಣ್ಮಣಿಯಾಗಿದ್ದ ಟಿ.ಬಿ ಡ್ಯಾಂ ಜಲಾನಯನ ಪ್ರದೇಶ, ಬೃಹತ್ ಪ್ರಮಾಣದ ಅದಿರಿನ ದಾಸ್ತಾನು ಕಟ್ಟೆಯಾಯ್ತು... ಮಳೆ ಬಂದಾಗ ನೀರಿನೊಂದಿಗೆ ಅದಿರಿನ ಕಣಗಳೂ ಟಿಬಿ ಡ್ಯಾಂ ಸೇರಿದವು. . ಅಮೂಲ್ಯ ನೀರು ಗಬ್ಬೆದ್ದುಹೋಯ್ತು.  ಅಣೆಕಟ್ಟೆಯಲ್ಲಿ ಹೂಳು ತುಂಬಿ ಹೋಯ್ತು.  ಇಡೀ ವಾತಾವರಣವೇ ಹಾಳಾಗಿಹೋಯ್ತು...

ಇನ್ನು, ಡ್ಯಾಂ ಹತ್ತಿರ ಡಂಪ್ ಮಾಡುವ ಅದಿರನ್ನು ಸಾಗಿಸಿದ್ದರಿಂದ ಉಂಟಾದ ಧೂಳು ಇಡೀ ಪ್ರದೇಶದ ಅರಣ್ಯ ಹಾಗೂ ಜಲ ಮೂಲವನ್ನೂ ಹಾಳು ಮಾಡಿತು.. ಈ ಮೂಲಕ MSPL ಭಾರೀ ಪ್ರಮಾಣದ ಪರಿಸರ ಮಾಲಿನ್ಯಕ್ಕೆ ಕಾರಣವಾಯ್ತು...

MSPLನಿಂದ 200 ಎಕರೆ ಜಮೀನು ಒತ್ತುವರಿಯಾಗಿರುವ ಬಗ್ಗೆ ಹೊಸಪೇಟೆಯ ಪರಿಸರ ಸಂರಕ್ಷಣಾ ಸಮಿತಿಯು ಕೇಂದ್ರದ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ದಾಖಲೆ ಸಹಿತ ದೂರು ನೀಡಿದೆ. ಜೊತೆಗೆ ವಿಎಂಪಿ ಲಿಮಿಟೆಡ್, ಟ್ರಿಡೆಂಟ್ ಮಿನರಲ್ಸ್, ಎಸ್​.ಬಿ. ಮಿನರಲ್ಸ್ ವಿರುದ್ಧವೂ ದೂರು ದಾಖಲಾಗಿದೆ. ಈ ದೂರಿನ ಬಗ್ಗೆ ರಾಜ್ಯ ಅರಣ್ಯ ಇಲಾಖೆಯ ಮುಖ್ಯ ಕನ್ಸರ್ವೇಟರ್ ಆಫೀಸರ್​ಗೆ ಪತ್ರ ಬರೆದ ಕೇಂದ್ರ ಪರಿಸರ ಸಚಿವಾಲಯದ ಅಧಿಕಾರಿ ಎನ್​.ಎಸ್​. ಮುರಳಿ, ತನಿಖೆ ನಡೆಸುವಂತೆ ಫೆಬ್ರವರಿ 4, 2010ರಂದು ಆದೇಶ ಕೂಡ ಕೊಟ್ಟಿದ್ದ್ರು.

ಇದಷ್ಟೇ ಅಲ್ದೇ ಮಾನ್ಯ ಸರ್ವೋಚ್ಛ ನ್ಯಾಯಲಯ ರಚಿಸಿದ್ದ ಎಂಪವರ್ ಕಮಿಟಿ ಕೂಡಾ, MSPL ಅಕ್ರಮದ ಬಗ್ಗೆ ಬಂದಿರುವ ದೂರುಗಳನ್ನಾಧರಿಸಿ, ತಕ್ಷಣವೇ ಸಿಇಸಿ ಅಧಿಕಾರಗಳನ್ನು ಕಳುಹಿಸಿ ಸರ್ವೇ ಮಾಡಲು ಸೂಚಿಸಿತ್ತು...

ಬಳ್ಳಾರಿ ವಿಭಾಗದ ಡೆಪ್ಯುಟಿ ಕನ್ಸರ್ವೇಟರ್ ಆಫೀಸರ್ ಟಿ.ವಿ. ಶ್ರೀನಿವಾಸ್, ಗಡಿ ಉಲ್ಲಂಘನೆ ಆಗಿರುವುದು ನಿಜ ಅಂತ ಕೇಂದ್ರಕ್ಕೆ ವರದಿ (Mention date) ಕೊಟ್ಟಿದ್ದ್ರು... ವ್ಯಾಸನಕೆರೆ ಸರ್ವೇ ನಂಬರ್ 1 ಹಾಗೂ ಕಲ್ಲಹಳ್ಳಿ ಸರ್ವೇ ನಂಬರ್ 97ರ ಮಧ್ಯೆ ಯಾವುದೇ ಗಡಿ ಗುರುತು ಇಲ್ಲ ; ಎಲ್ಲವನ್ನೂ MSPLನವರೂ ಧ್ವಂಸಗೊಳಿಸಿದ್ದಾರೆ; ಇದು ಅರಣ್ಯ ಕಾಯ್ದೆಯ ಉಲ್ಲಂಘನೆ ಅಂತ ಕೇಂದ್ರಕ್ಕೆ ವರದಿ ನೀಡಿದ್ರು... ಈ ಪ್ರದೇಶದ ಸರ್ವೇ ಮಾಡೋಕೆ ಬಲ್ಡೋಟಾ ಕಂಪನಿಯವರು ಕಳೆದ ನಾಲ್ಕು ವರ್ಷಗಳಿಂದಲೂ ಬಿಟ್ಟಿಲ್ಲ ಅಂತಲೂ ಅವರು ತಮ್ಮ ವರದಿಯಲ್ಲಿ ಬರೆದಿದ್ದ್ರು. ಮೈನಿಂಗ್ ಗುತ್ತಿಗೆ ಪ್ರದೇಶಗಳ ಗಡಿ ಗುರುತಿಸೋದಿಕ್ಕೆ ಸಮಗ್ರ ತನಿಖೆ ಅಗತ್ಯವಿದೆ ಅನ್ನೋ ಸಲಹೆಯನ್ನೂ ಶ್ರೀನಿವಾಸ್ ಕೊಟ್ಟಿದ್ದ್ರು...

ಇನ್ನು, ಗಣಿ ಅಕ್ರಮದ ಬಗ್ಗೆ ತನಿಖೆಗೆ ಮುಂದಾದ ಲೋಕಾಯುಕ್ತರಿಗೂ ಶಾಕ್ ಕಾದಿತ್ತು...ಒಂದು ವಿಚಿತ್ರ ಅಂದ್ರೆ, ಇದೇ ವ್ಯಾಸನಕೆರೆ ಮೈನಿಂಗ್​ನಿಂದ ಒಂದು ಗಡಿಕಲ್ಲು ನೇರ ತುಂಗಭದ್ರಾ ಜಲಾಶಯದ ಒಳಗಿತ್ತು.  ಟಿ.ಬಿ. ಡ್ಯಾಂನಲ್ಲಿ ನಡೆದಿರುವ ಒತ್ತುವರಿ ಹಾಗೂ ಅಕ್ರಮವನ್ನ ಪತ್ತೆ ಹಚ್ಚೋದಿಕ್ಕೆ ಲೋಕಾಯುಕ್ತ ಅಧಿಕಾರಿಗಳು 6 ತಿಂಗಳ ಕಾಲ ಕಾಯಬೇಕಾಯ್ತು.. ಯಾಕಂದ್ರೆ ಜಲಾಶಯದ ನೀರು ಕಡಿಮೆಯಾಗುವವರೆಗೂ ಗಡಿಕಲ್ಲು ಗುರುತಿಸೋಕೆ ಸಾಧ್ಯ ಆಗೋಹಾಗಿರ್ಲಿಲ್ಲ. ಆದ್ರೆ ಲೋಕಾಯುಕ್ತರಿಗೆ ಕೊನೆಗೂ ನಿರಾಸೆ ಕಾದೇ ಇತ್ತು. ಯಾಕಂದ್ರೆ ಮಾಡಿದ ಅಕ್ರಮವೆಲ್ಲವೂ ಜಲಾಶಯದ ನೀರಿನಲ್ಲಿ ಲೀನವಾಗಿತ್ತು. ಇದು ಬಲ್ಡೋಟಾ ಎಂಬ ಚಾಣಾಕ್ಷನ ತಾಕತ್ತು.. ಅಧಿಕಾರಿಗಳನ್ನು ದಾರಿ ತಪ್ಪಿಸೋದ್ರಲ್ಲಿ ಬಲ್ಡೋಟ ನಿಸ್ಸೀಮ. ಹೀಗಾಗಿಯೇ 40 ವರ್ಷಗಳಿಂದ ಅಕ್ರಮ ಗಣಿಗಾರಿಕೆಯನ್ನು ಯಾವುದೇ ಎಗ್ಗಿಲ್ಲದೆ ನಡೆಸಲು ಸಾಧ್ಯವಾಗಿದೆ ರಾಹುಲ್ ಬಲ್ಡೋಟಾಗೆ.

ಇನ್ನು, MSPLಗೆ ಅಕ್ರಮದ ಜೊತೆ ದರ್ಪವೂ ಜೋರಾಗಿಯೇ ಇದೆ. ವ್ಯಾಸನಕೆರೆ ಗಣಿ ಪ್ರದೇಶದ ಅಕ್ಕಪಕ್ಕದಲ್ಲಿ ವಿ.ನಾಗ್ ಹಾಗೂ ಎಸ್​.ಬಿ. ಮಿನರಲ್ಸ್ ಎಂಬ ಮೈನಿಂಗ್ ಕಂಪೆನಿಗಳಿವೆ. ತಮ್ಮ ಪ್ರಭಾವವನ್ನು ಬಳಸಿಕೊಂಡ MSPL, ಸರ್ಕಾರಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ನೆರೆಹೊರೆಯ ಮೈನಿಂಗ್ ಮಾಲೀಕರನ್ನ ಹೆದರಿಸುವ ಕೆಲಸವನ್ನೂ ಮಾಡಿದೆ. ಹಾಗಾಗೇ ಅಲ್ಲಿನ ಜನ MSPL ಮುಖ್ಯಸ್ಥರನ್ನ ಮೈನ್ಸ್ ವೀರಪ್ಪನ್ ಅಂತಲೇ ಕರೆಯೋದು
=====================
MSPL ಅಕ್ರಮಗಳು, ದೌರ್ಜನ್ಯಗಳು ಇಷ್ಟಕ್ಕೇ ಮುಗಿಯೋಲ್ಲ. ರಾಮಗಡ ಮೈನಿಂಗ್ ಅನ್ನೋ ಉತ್ಕೃಷ್ಟ ಗಣಿಯನ್ನೂ ಕೂಡ ತನ್ನ ತೆಕ್ಕೆಗೆ ತೆಗೆದುಕೊಳ್ಳೋಕೆ ಬಲ್ಡೋಟಾ ಎಂತೆಂತಹ ಕಸರತ್ತು ಮಾಡಿದ್ರು ಅನ್ನೋದು ಇನ್ನೊಂದು ದೊಡ್ಡ ಕಥೆ. ಆ ಕಥೆ, ಒಂದು ಬ್ರೇಕ್ ಅದ್ಮೇಲೆ...
_________________________________________________________________________________________________________________________




ಲೋಕಾಯುಕ್ತರಿಂದ ಹಿಡಿದು ಗಣಿ, ಭೂವಿಜ್ಞಾನ ಹಾಗೂ ಅರಣ್ಯಾಧಿಕಾರಿಗಳ ತನಕ ಎಲ್ಲರ ಕಣ್ಣಿಗೂ ಮಣ್ಣೆರಚಿ, ದಾರಿ ತಪ್ಪಿಸಿ ತಮ್ಮ ಪಾಡಿಗೆ ತಾವು ಆರಾಮಾಗಿ ಬೇಕುಬೇಕಾದ ಕೆಲಸ ಮಾಡಿಕೊಳ್ಳೋದ್ರಲ್ಲಿ ಬಲ್ದೋಟ ಅದೆಷ್ಟು ಎಕ್ಸ್  ಪರ್ಟ್ ಅನ್ನೋದು ಈಗಾಗ್ಲೇ ನಿಮಗೆ ಅರ್ಥ ಆಗಿರಬಹುದು.ಅದಕ್ಕೆ ಇನ್ನಷ್ಟು ಪುರಾವೆ ಬೇಕಿದ್ದ್ರೆ, ಅವ್ರು ಅದು ಹೇಗೆ  ದಾಲ್ಮಿಯಾ ಸಿಮೆಂಟ್ಸ ಕಂಪನಿಯ ರಾಮಗಡ ಮೈನಿಂಗನ್ನ ತಮ್ ವಶಕ್ಕೆ ತಗೊಂಡ್ರು ಅನ್ನೋ ಈ ಕಥೆ ನೋಡಿ.
======================
2. ರಾಮಗಡ ಮಿನರಲ್ಸ್ - ಮೈನಿಂಗ್ ಲೈಸೆನ್ಸ್ ನಂಬರ್ ML 2451

ಈ RMMPL ಕಥೆಯನ್ನ ನಿಮಗೆ ಹೇಳಲೇ ಬೇಕು. ಕಥೆ ಹೇಳೋಕೆ  ಮುಂಚೆ, ಈ ಕಂಪನಿ ಮಾಡಿರೋ  ಒಂದಿಷ್ಟು ಘನಂದಾರೀ ಕೆಲಸಗಳ ಪಟ್ಟಿ ಕೇಳಿಸ್ಕೊಳ್ಳಿ:

ಈ RMMPL ಅಂದ್ರೆ, ರಾಮಗಡ ಮಿನರಲ್ಸ್ ಅಂಡ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಅಂತ. ಇದೂ ಕೂಡಾ ಬಲ್ಡೋಟಾ ಒಡೆತನದ ಕಂಪನಿ.... ಮೈನಿಂಗ್ ಲೈಸೆನ್ಸ್ ನಂಬರ್ ML 2451 ಮೂಲಕ ಸಂಡೂರು ಬಳಿಯಿರೋ ರಾಮಗಡ ಪ್ರದೇಶದಲ್ಲಿ ಗಣಿ ಗುತ್ತಿಗೆ ಪಡೆದಿರೋ RMMPL, ಇಲ್ಲೂ ಕೂಡಾ 331 ಹೆಕ್ಟೇರ್​ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮಾಡ್ತಿದೆ... ಇಲ್ಲಿಯೂ ಅರಣ್ಯ ಒತ್ತುವರಿ ಅವ್ಯಾಹತವಾಗಿ ನಡೆದಿದೆ... ಹೀಗಾಗಿ ಹಲವು ಅರಣ್ಯ ಮೊಕದ್ದಮೆಗಳು ದಾಖಲಾಗಿವೆ.. ಸಂಡೂರು ವಲಯ ಅರಣ್ಯಾಧಿಕಾರಿಗಳು ಈ ಸಂಬಂಧ RMMPL ಮೇಲೆ ಚಾರ್ಜ್​ಶೀಟ್​ ಕೂಡಾ ಸಲ್ಲಿಸಿದ್ದಾರೆ...

ಸರ್ಕಾರಕ್ಕೆ ಸೇರಿದ ಅರಣ್ಯ ಪ್ರದೇಶದಲ್ಲಿ ಈ ಕಂಪನಿ ಗಣಿ ತ್ಯಾಜ್ಯ ಸುರಿದಿತ್ತು... ಇಲಾಖೆ ವ್ಯಾಪ್ತಿಯ ಜಾಗದಲ್ಲಿ ಮಣ್ಣು ಗುಡ್ಡೆ ಹಾಕಿದ RMMPL, ದಾರಿಯನ್ನೇ ಬಂದ್ ಮಾಡಿತ್ತು... ಅನುಮತಿ ಇಲ್ಲದೆ ಅದಿರನ್ನು ಸಾಗಿಸುವುದರ ಜೊತೆಗೆ ಅರಣ್ಯ ವ್ಯಾಪ್ತಿಯಲ್ಲಿ ಆಳವಾದ ಗುಂಡಿ ತೋಡಿಟ್ಟಿತ್ತು... ಸಾಲದ್ದಕ್ಕೆ, ತಮ್ಮ ಸ್ಟಾಕ್​ ಯಾರ್ಡ್​ನಲ್ಲಿ ಅಕ್ರಮವಾಗಿ ಅದಿರು ದಾಸ್ತಾನು ಮಾಡಿಟ್ಟುಕೊಂಡಿತ್ತು.....

ಅದೊಂದ್ಕಡೆ ಇರ್ಲಿ ಬಿಡಿ; ಈ ಬಲ್ದೋಟ ಕಂಪನಿ ಎಂಥಾ ಪಾಕಡಾ ಕಂಪ್ನಿ ಅಂದ್ರೆ, ತನ್ ಕೈಗೆ ಲೈಸೆನ್ಸ್ ಬರೋಕೂ ಮುಂಚೆಯೇ RMMPLಗೆ ಲಗ್ಗೆ ಹಾಕಿ ಅಲ್ಲಿ ಲೂಟಿ ಹೊಡೆಯೋಕೆ ತಯಾರಿ ಮಾಡ್ಕೊಂಡು ಬಿಟ್ಟಿತ್ತು. ಲೈಸೆನ್ಸ್ ಸರಂಡರ್ ಮಾಡಿದ್ದ ದಾಲ್ಮಿಯಾ ಮಿನರಲ್ಸ್​ನ ಗಣಿ ಪ್ರದೇಶದಲ್ಲಿ ಅನುಮತಿಯಿಲ್ಲದೇ RMMPLನ ಸೆಕ್ಯುರಿಟಿ ಗಾರ್ಡ್​ ನೇಮಕ ಮಾಡಲಾಗಿತ್ತು.  2001ರಿಂದಲೇ ಅಲ್ಲಿ ಯಾರು ಇಲ್ಲ ಅನ್ನೋದನ್ನ ನೋಡ್ಕೊಂದ ರಾಹುಲ್ ಬಲ್ಡೋಟಾ, ಲೈಸೆನ್ಸ್ ಇಲ್ಲದೆಯೇ ಅಲ್ಲಿ ಗಣಿಗಾರಿಕೆ ನಡೆಸೋಕೆ ಶುರು ಮಾಡಿದ್ದ್ರು... ಇಂಥ ಹಲವು ಗಂಭೀರ ಅಪರಾಧಗಳನ್ನ ರಾಮಗಡ ಮಿನರಲ್ಸ್ ಮಾಡಿದೆ...

3. ದಾಲ್ಮಿಯಾ ಮಿನರಲ್ಸ್ - ಲೈಸೆನ್ಸ್ ನಂಬರ್  ML 2010

ಅತ್ತ MSPL ವ್ಯಾಸನಕೆರೆಯಲ್ಲಿ ಅಕ್ರಮದ ದಾಪುಗಾಲಿಡುತ್ತಿದ್ದರೆ, ಇತ್ತ ದಾಲ್ಮಿಯಾ ಸಿಮೆಂಟ್ಸ್​ನವರಿಗೆ ಸೇರಿದ ಸಂಡೂರು ತಾಲೂಕಿನ ಜೈಸಿಂಗಪುರದಲ್ಲಿ ಒಂದು ಮೈನಿಂಗ್ ಲೈಸೆನ್ಸ್ ಇತ್ತು. ದಾಲ್ಮಿಯಾ ಕಂಪೆನಿ 331.44 ಎಕರೆ ಜಾಗದಲ್ಲಿ ಮೈನಿಂಗ್ ನಡೆಸುತ್ತಿತ್ತು... ಇದರ ಮೈನಿಂಗ್ ಲೈಸೆನ್ಸ್ ನಂಬರ್ ML 2010. ದಾಲ್ಮೀಯಾ ಕಂಪನಿ 1953ರಲ್ಲಿ 30 ವರ್ಷಗಳಿಗೆ ಗುತ್ತಿಗೆ ಪಡೆದಿತ್ತು ಹಾಗೂ 1983ರಲ್ಲಿ ಮತ್ತೆ 20 ವರ್ಷಗಳಿಗೆ ನವೀಕರಣವನ್ನೂ ಮಾಡಿಸಿಕೊಂಡಿತ್ತು. ಆದ್ರೆ ಸರ್ಕಾರ 1997ರಲ್ಲಿ ದಾಲ್ಮಿಯಾ ಮಿನರಲ್ಸ್​ಗೆ ಗಣಿಗಾರಿಗೆ ನಿಲ್ಲಿಸುವಂತೆ ನೊಟೀಸ್ ಕೊಡ್ತು.. ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದ ಹಾಗೂ ನಿಬಂಧನೆಗಳನ್ನು ಪೂರೈಸದ ಹಿನ್ನೆಲೆಯಲ್ಲಿ ದಾಲ್ಮಿಯಾ ಲೈಸೆನ್ಸ್ ರದ್ದುಗೊಂಡಿತ್ತು. ಹೀಗಾಗಿ 16-06-2001ರಲ್ಲಿ ಗಣಿಗಾರಿಗೆ ನಿಲ್ಲಿಸಿದ ದಾಲ್ಮಿಯಾ ಕಂಪೆನಿ ಪರವಾನಗಿಯನ್ನು ಸರ್ಕಾರಕ್ಕೆ ಸರೆಂಡರ್ ಮಾಡ್ತು. ...

ಇದನ್ನೇ ಕಾಯ್ತಿದ್ದ ಬಲ್ಡೋಟಾ ಗ್ರೂಪ್​ ದಾಲ್ಮಿಯಾ ಮಿನರಲ್ಸ್​ನ ಗುತ್ತಿಗೆಯನ್ನು ತಾನು ಪಡೆಯೋಕೆ ಮುಂದಾಯ್ತು... ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮನವಿಯನ್ನು ಕೊಡ್ತು.. MSPLನ ಎಕ್ಸಿಕ್ಯುಟಿವ್ ಡೈರೆಕ್ಟರ್ ರಾಹುಲ್ ಬಲ್ಡೋಟಾ ರಾಜ್ಯ ಸರ್ಕಾರಕ್ಕೆ ಅರ್ಜಿ ಹಾಕಿದ್ರು. ಅವ್ರು ಬಯಸಿದ ಹಾಗೇ ಈ ಮೈನಿಂಗಿನ ಗುತ್ತಿಗೆ ಅವ್ರಿಗೆ ಸಿಕ್ಕೂಬಿಡ್ತು. ಆದ್ರೆ ಇಲ್ಲೊಂದು ಮರ್ಮ  ಇದೆ. ಆಕ್ಚುಯಲಿ, ಮಿನರಲ್ ಕನ್ಸವರ್ಷೇನ್​  ಆಕ್ಟ್ ಪ್ರಕಾರ ಒಂದು ಕಂಪನಿ ತನ್ನ ಗುತ್ತಿಗೆ ಲೈಸೆನ್ಸನ್ನ  ಸರಂಡರ್ ಮಾಡಿದ್ಮೇಲೆ, ಆ ಜಾಗಾನ ಮತ್ತೆ ನೋಟಿಫೈ ಮಾಡಿ ಮತ್ತೆ ಹರಾಜು ಹಾಕದ ಹೊರತು ಇನ್ನೊಬ್ಬರಿಗೆ ಗುತ್ತಿಗೆಗೆ ಕೊಡೋ  ಹಾಗಿಲ್ಲ. ಆದ್ರೆ ಅವತ್ತು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರ ಎಸ್​.ಎಂ. ಕೃಷ್ಣ ಅವ್ರು ದಾಲ್ಮಿಯಾ ಗಣಿ ಗುತ್ತಿಗೆಯನ್ನ ಬಲ್ಡೋಟಾ ಕಂಪೆನಿಗ ಸರಾಗವಾಗಿ ವರ್ಗ ಮಾಡಿ ಕೂತ್ಕೊಂಡ್ರು... ಮಿನರಲ್ ಕನ್ಸರ್ವಶನ್​ ಆಕ್ಟ್ 1960ರ ನಿಯಮ 59ನ್ನು ಗಾಳಿಗೆ ತೂರಿಬಿಟ್ಟ್ರು. ಮಾರ್ಚ್ 16, 2002ರಂದು ಬಲ್ಡೋಟಾಗೆ ಗಣಿ ಲೈಸೆನ್ಸ್ ಹಸ್ತಾಂತರದ ಆದೇಶ ಕೊಟ್ರು...

ಲಾಬಿಗೆ ಹೆಸರಾದ ಬಲ್ಡೋಟಾ ಕೇಂದ್ರ ಸರ್ಕಾರದ ಪರಿಸರ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳ ಕೈ ಬಿಸಿ ಮಾಡಿ, ಅಕ್ರಮವಾಗಿ ಅಪ್ರೂವಲ್​ ಕೂಡಾ ಪಡೆದ್ರು... ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ವಿಶೇಷ ಆದೇಶ ನೀಡಿದ ಕೇಂದ್ರ ಪರಿಸರ ಸಚಿವಾಲಯ, RMMPLಗೆ ಗಣಿ ಗುತ್ತಿಗೆ ನೀಡುವಂತೆ ಆದೇಶ ಹೊರಡಿಸ್ತು... ರಾಜ್ಯದ ಪ್ರಿನ್ಸಿಪಲ್ ಸೆಕ್ರೆಟರಿಗೆ ಆದೇಶದ ಪ್ರತಿ ಕಳುಹಿಸ್ತು... 2006ರ ಸೆಪ್ಟೆಂಬರ್ 13ರಂದು ಸ್ಟೇಜ್ ಒನ್​ಗೆ ಪರ್ಮಿಷನ್ ನೀಡಿದ್ರೆ, 2010 ಸೆಪ್ಟೆಂಬರ್ 9ರಂದು 2ನೇ ಹಂತದ ಅಪ್ರೂವಲ್ ನೀಡ್ತು... ವಿಚಿತ್ರ ಅಂದ್ರೆ ಇದಕ್ಕೆ ರಾಜ್ಯ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಇರಲೇ ಇಲ್ಲ... ಇನ್ನೂ ವಿಚಿತ್ರ ಅಂದ್ರೆ, 2010ನೇ ಇಸ್ವಿ ವರೆಗೂ ಬಿಜೆಪಿ ಸರ್ಕಾರ ಕೂಡ ಈ ಬಗ್ಗೆ ತುಟಿಪಿಟಿಕ್ ಎಂದಿರ್ಲಿಲ್ಲ..

ಇದಕ್ಕೆ ಎಂಎಸ್​ಪಿಎಲ್ ಕೊಡೋ ಸಮಜಾಯಿಷಿಯೇನಂದ್ರೆ, ಡಾಲ್ಮೀಯಾ ಲೈಸೆನ್ಸ್​ ಸಂಪೂರ್ಣವಾಗಿ ಸರೆಂಡರ್ ಆಗಿರಲಿಲ್ಲವಾದ್ದ್ರಿಂದ ತಾನು ಲೀಸ್ ತಗೊಂಡ ಕ್ರಮ ನ್ಯಾಯಯುತ ಅಂತ. ಖುದ್ದು ಬಲ್ದೋಟ ಅವ್ರೇ ತೆಹಲ್ಕಾ ಪತ್ರಿಕೆಗೆ ಈ ಟೆಕ್ನಿಕಲ್ ಕಾರಣ ಕೊಟ್ಟಿದಾರೆ..

ಈಗಿರೋ ಅತಿ ಮುಖ್ಯವಾದ ಪ್ರಶ್ನೆ ಏನಂದ್ರೆ, ಬಳ್ಳಾರಿ ಗಣಿಗಾರಿಕೆಯಿಂದ ಬೊಕ್ಕಸಕ್ಕೆ ಅಪಾರ ಹಾನಿಯಾಗಿದೆ; ಪರಿಸರ ಹಾಳಾಗ್ಹೋಗಿದೆ ಅಂತೆಲ್ಲಾ ಬೊಬ್ಬೆ ಹೊಡೀತಿರೋ ಹುಸಿ ಪರಿಸರವಾದಿಗಳಿಗೆ ಬಲ್ಡೋಟಾ ಅಕ್ರಮಗಳು ಯಾಕೆ ಕಣ್ಣಿಗೆ ಕಾಣ್ತಿಲ್ಲ ಅನ್ನೋದು. ಮೈನಿಂಗ್ ಎಂದರೆ ರೆಡ್ಡಿ ಬ್ರದರ್ಸ್ ಅನ್ನೋ ಅಪಖ್ಯಾತಿಯನ್ನು ಅವರ ತಲೆಗೆ ಕಟ್ಟಿ ಕೂತಿದ್ದಾರೆಯೇ ಹೊರತು, ಈ ಇಡೀ  ಪ್ರಕರಣದ ಆಳ-ಅಗಲಗಳನ್ನ ಸರಿಯಾಗಿ ಶೋಧಿಸೋ ಕೆಲಸವನ್ನ ತನಿಖಾ ಸಂಸ್ಥೆಗಳು ಯಾಕೆ  ಮಾಡ್ತಿಲ್ಲ ಅನ್ನೋದು.

ಕಳೆದ ಸೆಪ್ಟೆಂಬರ್​ನಲ್ಲಿ ಬಂಧನಕ್ಕೊಳಗಾದ ಮಾಜಿ ಸಚಿವ ಜನಾರ್ದನ ರೆಡ್ಡಿಯವರಿಗೆ ಈವರೆಗೂ ಜಾಮೀನು ಸಿಗದಂತೆ ನೋಡಿಕೊಳ್ಳುತ್ತಿರುವವರು ಯಾರು ಅನ್ನೋ ಪ್ರಶ್ನೆಗೆ ಕೂಡ, ಬಹುಶಃ ಈ ಪ್ರಶ್ನೆಗಳಲ್ಲೇ ಉತ್ತರ ಸಿಗುತ್ತೆ. ಗಣಿಗಾರಿಕೆಯಲ್ಲಿ ಪ್ರಭುತ್ವ ಸಾಧಿಸೋದಿಕ್ಕೆ ಅಂತ ಬಲ್ಡೋಟಾ ಮಾಡಿರುವಂಥಾ,  ಇನ್ನೂ ಮಾಡ್ತಾನೇ ಇರುವಂಥ ಅಕ್ರಮಗಳಿಗೆ ಕೊನೆ ಮೊದಲಿಲ್ಲ.. ಇದನ್ನ ತೆಹಲ್ಕಾ ಡಾಟ್​ ಕಾಮ್​ ಎಳೆಎಳೆಯಾಗಿ ಬಿಚ್ಚಿಟ್ಟಿದೆ.... ಬಟ್ ದೆನ್‌, ಎಲ್ಲಾ ರಾಜಕೀಯದಾಟ... ಜನಾರ್ದನ ರೆಡ್ಡಿಯವ್ರು ಹೆಚ್ಚುಕಡಿಮೆ ಒಂದೂವರೆ ವರ್ಷದಿಂದ ಜೈಲಿನಲ್ಲಿ ಕೂತಿದ್ದಾರೆ; ಬಲ್ದೋಟ ಅಂಡ್ ಕಂಪನಿ, ಪ್ರತಿಷ್ಠಿತ 'ಪ್ರೆಸಿಡೆಂಟ್ಸ್ ನ್ಯಾಷನಲ್ ಸೇಫ್ಟಿ ಅವಾರ್ಡ್' ಕೈಯಲ್ಲಿ ಹಿಡ್ಕೊಂಡು  ಬೀಗ್ತಾ ಕೂತಿದೆ.... ವಿಪರ್ಯಾಸ.
===========================
 -ಅಮೃತ ಕಿರಣ ಬಿ.ಎಂ.