Saturday, December 27, 2014

ಪುಸ್ತಕ ಮನೆ


ಪುಸ್ತಕ ಮನೆ ಲೋಕಾರ್ಪಣೆ
ಅದೊಂದು ಅಪರೂಪದ ಸಮಾರಂಭ. ಬಳ್ಳಾರಿ ಜಿಲ್ಲೆಯ ಗಡಿ ಭಾಗದ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಯೊಬ್ಬರು ತಮ್ಮ ಹಳೆಯ ಮನೆ ಇದ್ದ ಜಾಗದಲ್ಲಿ ಪುಸ್ತಕ ಮನೆ ನಿರ್ಮಿಸಿ ಜ್ಞಾನ ದಾಸೋಹಕ್ಕೆ ಮುನ್ನುಡಿ ಬರೆದಿದ್ದಾರೆ. ಇವರೇ ಡಾ. ಹೆಚ್.ಎಂ. ಮರುಳಸಿದ್ದಯ್ಯ. ಖ್ಯಾತ ಸಮಾಜಶಾಸ್ತ್ರಜ್ಞ ಹಾಗೂ ಹಿರಿಯ ಸಾಹಿತಿ... ತಮ್ಮ ಬಹು ದಿನಗಳ ಬಯಕೆಯಂತೆ ಗ್ರಂಥಾಲಯವೊಂದನ್ನು ನಿರ್ಮಿಸಿ ದಾನ ಮಾಡಿ ತಮ್ಮೂರಿನ ಪ್ರೀತಿಯನ್ನು ಈ ಮೂಲಕ ತೋರಿಸಿದ್ದಾರೆ...
---------
 ಸಾಹಿತಿಗಳು ಪುಸ್ತಕದ ಹುಳುಗಳು.. ಪುಸ್ತಕಗಳ ಅಧ್ಯಯನ ಮಾಡ್ತಾರೆ. ಹೊಸ ಹೊಸ ಕೃತಿಗಳನ್ನು ರಚಿಸ್ತಾರೆ. ಆದ್ರೆ ಬಹಳಷ್ಟು ಜನ ಮಾಡದ ಕೆಲಸವೊಂದನ್ನು ಇವ್ರು ಮಾಡಿದ್ದಾರೆ. ಇವ್ರು ಪ್ರೊಫೆಸರ್ ಹೆಚ್.ಎಂ. ಮರುಳಸಿದ್ಧಯ್ಯ. ಬೆಂಗಳೂರು ವಿವಿಯ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಓದು, ಬರಹ, ಅಧ್ಯಾಪನೆಯಲ್ಲೇ ವೃತ್ತಿ ಜೀವನ ಕಳೆದ್ರು. ನಿವೃತ್ತಿಯ ಬಳಿಕ ಅವರ ಸಾಮಾಜಿಕ ಕಳಕಳಿಗೆ ಮತ್ತಷ್ಟು ಹೊಳಪು ಪಡೆದುಕೊಂಡಿತು. ಅದಕ್ಕೆ ಸಾಕ್ಷಿ ಈ ಪುಸ್ತಕ ಮನೆ...

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇ ಕುಂಬಳಗುಂಟೆ. ಬಹಳಷ್ಟು ಜನರಿಗೆ ಗೊತ್ತಿಲ್ಲದ ಕುಗ್ರಾಮ. ಒಂದೆಡೆ ಡ್ರಮ್ಸ್ ಬಾರಿಸ್ತಾ ಇರೋ ಹುಡುಗರು, ಇನ್ನೊಂದೆಡೆ ನಂದಿಕೋಲಿನ ಕುಣಿತ.. ಇದೆಲ್ಲಾ ನೋಡಿದ್ರೆ ಇದೊಂದು ಜಾತ್ರೆ ಅನ್ಸುತ್ತೆ. ಆದ್ರೆ ನಿಮ್ಮ ಊಹೆ ತಪ್ಪು. ಹಿರೇ ಕುಂಬಳಗುಂಟೆ ಗ್ರಾಮದಲ್ಲಿ  ನಡೆದದ್ದು ಪುಸ್ತಕ ಪ್ರೇಮಿಗಳ ಸಂಗಮ. ಮರುಳಸಿದ್ದಯ್ಯ ಅವ್ರು ಹುಟ್ಟಿ ಬೆಳೆದ ತಮ್ಮ ಮನೆಯನ್ನೇ ಪುನಃ ನವೀಕರಿಸಿದ್ದಾರೆ. ಇದು ಈಗ ಮನೆ ಅಲ್ಲ.. ಪುಸ್ತಕ ಮನೆ...

ತಮ್ಮ ಮನೆಯನ್ನು ತಾವು ಆಡಿ ಬೆಳೆದ ಊರಿನ ಜನರ ಜ್ಞಾನ ವಿಕಾಸಕ್ಕೆ ಅನುಕೂವಾಗಲಿ ಎಂದು ಗ್ರಂಥಾಲಯವಾಗಿ ಪರಿವರ್ತಿಸಿದ್ದಾರೆ ಡಾ. ಹೆಚ್​.ಎಂ. ಮರುಳಸಿದ್ದಯ್ಯ. ತಮ್ಮ 85ನೇ ಇಳಿ ವಯಸ್ಸಿನಲ್ಲಿ ನಡೆಯಲೂ ಕಷ್ಟಪಡುವ ಈ ಸ್ಥಿತಿಯಲ್ಲಿ ಬೆಂಗಳೂರಿನಿಂದ ತಮ್ಮ ಊರಿಗೆ ಆಗಮಿಸಿ, ಒಂದಷ್ಟು ಸಾಹಿತ್ಯಾಸಕ್ತರು, ಕುಟುಂಬ ವರ್ಗದವರು ಹಾಗೂ ಅಭಿಮಾನಿಗಳನ್ನು ಕಲೆಹಾಕಿ ಲೈಬ್ರರಿಯನ್ನು ಜನತೆಗೆ ಅರ್ಪಿಸಿದ್ದಾರೆ. ಇದ್ಕೆ ಜಿಲ್ಲಾ ಶಿಕ್ಷಣ ಇಲಾಖೆ ಬೆನ್ನೆಲುಬಾಗಿ ನಿಂತಿದ್ದು ಶ್ಲಾಘನೀಯ.
ಡಾ. ಹೆಚ್.ಎಂ. ಮರುಳಸಿದ್ದಯ್ಯ ಮತ್ತು ಅವರ ಧರ್ಮಪತ್ನಿ
ಪ್ರೊ. ಮರುಳಸಿದ್ದಯ್ಯ ಅವರ ತಂದೆ-ತಾಯಿ
ತಮ್ಮ ಹಳೆಯ ಮನೆಯ ಜಾಗವನ್ನು ಗ್ರಾಮದ ಗ್ರಂಥಾಲಯಕ್ಕೆ ದಾನ ನೀಡುವ ಮೂಲಕ ಗ್ರಾಮದ  ಮೇಲಿನ ಪ್ರೀತಿಯನ್ನು ಮರೆದಿದ್ದಾರೆ ಡಾ. ಹೆಚ್​ಎಂಎಂ. ಅವರ ಈ ಸೇವೆಗೆ ಪ್ರತಿಯಾಗಿ ಮರುಳಸಿದ್ದಯ್ಯನವರ ಕುರಿತು ಖ್ಯಾತ ಸಮಾಜಶಾಸ್ತ್ರಜ್ಞ ಪ್ರೊಫೆಸರ್ ಕೆ.ಭೈರಪ್ಪನವರು ಬರೆದ ಕೃತಿ ಕೂಡಾ ಬಿಡುಗಡೆಯಾಯ್ತು.

ಹಿರೇ ಕುಂಬಳಗುಂಟೆ ಗ್ರಾಮದಲ್ಲಿ ತುಂಬು ಕುಟುಂಬದಲ್ಲಿ ಜನಿಸಿದ ಹೆಚ್.ಎಂ. ಮರುಳಸಿದ್ದಯ್ಯನವರು ಸಮಾಜಶಾಸ್ತ್ರದಲ್ಲಿ ಹೆಸರು ಮಾಡಿದ್ದು ಆಗಿನ ಕಾಲಕ್ಕೆ ಒಂದು ಅಚ್ಚರಿ. ಅವ್ರ ಸಾಹಿತ್ಯ ಕೃಷಿ ಅಪಾರ. ಸಮಾಜಶಾಸ್ತ್ರ ಅವ್ರ ನೆಚ್ಚಿನ ವಿಷಯವಾದರೂ ಕಥೆ, ಕವನ, ಪ್ರಬಂಧಗಳಲ್ಲೂ ಅವ್ರು ಸಿದ್ಧ ಹಸ್ತರು ಎಂಬುದಕ್ಕೆ ಅವ್ರ ಹತ್ತಾರು ಕೃತಿಗಳು ಉದಾಹರಣೆ... ಇದೇ ಗ್ರಾಮದಲ್ಲಿ ಸ್ಥಾಪಿಸಿರುವ ಮರುಳಸಿದ್ದಯ್ಯನವರ ಕನಸಿನ ಕೂಸು ಸ್ವಸ್ಥಿ ಎಂಬ ಸಮಾಜಸೇವಾ ಸಂಸ್ಥೆ ಎಲೆ ಮರೆ ಕಾಯಿಯಂತೆ ತನ್ನ ಸೇವೆಯಲ್ಲಿ ತೊಡಗಿದೆ. ವಿದೇಶಗಳ ವಿದ್ಯಾರ್ಥಿಗಳು ಹಿರೇ ಕುಂಬಳಗುಂಟೆಗೆ ಬಂದು ಅಧ್ಯಯನ ನಡೆಸಿದ್ದಾರೆ. ಇವ್ರ ಪುಸ್ತಕಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿವೆ...
ಡಾ. ಹೆಚ್.ಎಂ. ಮರುಳಸಿದ್ದಯ್ಯ

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಾನು ಹುಟ್ಟಿ ಬೆಳೆದ ಪರಿಸರವನ್ನು ಮರೆಯಬಾರದು ಎನ್ನುವ ಮಾತಿಗೆ ಮರುಳಸಿದ್ದಯ್ಯ ಅವ್ರು ಆದರ್ಶ. ತಮ್ಮ ಮನೆಯ ಜಾಗವನ್ನು ಸಮಾಜಕ್ಕಾಗಿ ಅದರಲ್ಲೂ ಪುಸ್ತಕ ಮನೆ ನಿರ್ಮಿಸಲು ನೀಡಿದ ಪ್ರೊಫೆಸರ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ...
- ಅಮೃತ ಕಿರಣ್ 

Thursday, December 25, 2014

ಮೈನಿಂಗ್ ಭೂತ ಬಲ್ಡೋಟಾ...!



ಮೈನಿಂಗ್ ಭೂತ  ಬಲ್ಡೋಟಾ...!




ಗಣಿಗಾರಿಕೆ ಅಂದ ತಕ್ಷಣ ನಮ್ಮ ಕಣ್ಣೆದುರಿಗೆ ಬರೋದು ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಚಿತ್ರ. ಇದಕ್ಕೆ ಕಾರಣ, ಅವ್ರ ಮೇಲೆ ಹಾಕಿರೋ ಥರಾವರಿ ಕೇಸುಗಳು, ಹಾಗೂ ಅವುಗಳನ್ನ ವೈಭವೀಕರಿಸಿರೋ ಮಾಧ್ಯಮಗಳು. ಆದರೆ ಅವ್ರ ವಿರುದ್ಧದ ಕೇಸುಗಳಿಂದ ಉಂಟಾಗಿರೋ ರಾಜಕೀಯ ತಲ್ಲಣಗಳ ಮಧ್ಯೆ, ಬಳ್ಳಾರಿಯನ್ನು ಅನೇಕ ವರ್ಷಗಳಿಂದ ಅಕ್ಷರಶಃ ತಮ್ಮ ಸ್ವಂತ ಜಾಗೀರಿನ ಹಾಗೆ ಬಳಸಿಕೊಂಡ ಇನ್ನೂ ಅನೇಕರ ಲೂಟಿ ಕಥೆಗಳು ಮರೆಯಾಗಿಹೋಗಿವೆ.  ಅಂಥ ಜನರ ಸಾಲಿನಲ್ಲಿ ಮೊದಲು ನಿಲ್ಲೋದು, ರಾಹುಲ್ ಬಲ್ದೋಟ. ಅವ್ರ ಬಗ್ಗೆ ಅದ್ಯಾಕೆ ತನಿಖಾ ಸಂಸ್ಥೆಗಳಿಗೆ, ರಾಜಕಾರಣಿಗಳಿಗೆ ಹಾಗೂ ಮಾಧ್ಯಮಗಳಿಗೆ ಜಾಣ ಕುರುಡು ಇದೆಯೋ ಗೊತ್ತಿಲ್ಲ. ಆದ್ರೆ, ಅವ್ರ ಜಾತಕವನ್ನ ಜಾಲಾಡ್ತಾ ಹೋದ್ರೆ ಹಲವು ಆಘಾತಕಾರಿ ಸಂಗತಿಗಳು ಬಿಚ್ಚಿಕೊಳ್ತಾ ಹೋಗ್ತವೆ. ಇದನ್ನ ತೆಹಲ್ಕಾ ಡಾಟ್​ ಕಾಮ್​ ಎಳೆಎಳೆಯಾಗಿ ಬಿಚ್ಚಿಟ್ಟಿದೆ.... ಬಲ್ಡೋಟಾ ಗ್ರೂಪ್ ಆಫ್​ ಕಂಪನೀಸ್ ಹೇಗೆ ವಿಷಸರ್ಪದಂತೆ ಮೈನಿಂಗ್ ದೈತ್ಯವಾಗಿ ಬೆಳೆದಿದೆ, ಹೇಗೆ ಪ್ರತಿ ಹಂತದಲ್ಲೂ ರೆಡ್ಡಿಯವರನ್ನ ಮಾತ್ರ ವಿಲನ್ ಮಾಡಿ ತಾನು ಊಸರವಳ್ಳಿಯ ಹಾಗೆ ಬಣ್ಣ ಬದಲಿಸ್ತಾ ಬಂದಿದೆ, ಯಾರ್ಯಾರ ಸಹಾಯದಿಂದೆಲ್ಲಾ ಅದು ಪಾರಾಗಿದೆ ಅನ್ನೋ ಎಲ್ಲ ವಿವರಗಳೂ ಅಲ್ಲಿವೆ. ಅವುಗಳನ್ನೇ ಬೆನ್ನತ್ತಿ ಹೋದ ಜನಶ್ರೀ ಟೀಮಿಗೂ ಅವುಗಳಿಗೆ ಸಂಬಂಧಪಟ್ಟ ಅನೇಕ ಶಾಕಿಂಗ್ ದಾಖಲೆಗಳು ಸಿಕ್ಕಿವೆ. ವಿಪರ್ಯಾಸ ಏನಂದ್ರೆ, ಬಲ್ಡೋಟಾ ಎಂಬ ಈ ವಂಚಕ ಕಂಪನಿಗೆ ಗಣಿಗಾರಿಕೆಗಾಗಿ ಕೊಡೋ 'ಪ್ರೆಸಿಡೆಂಟ್ಸ್ ನ್ಯಾಷನಲ್ ಸೇಫ್ಟಿ ಅವಾರ್ಡ್' ಕೂಡಾ ಸಿಕ್ಕಿದೆ ಈ ಸಲ ಅನ್ನೋದು..! ಪೊಲಿಟಿಲಕಲಿ ಈ ಬಲ್ದೋಟ ಅನ್ನೋ  ತಿಮಿಂಗಲ ಅದೆಷ್ಟು ಸ್ಟ್ರಾಂಗ್ ಇರಬಹುದು ಅನ್ನೋದ್ರ ಅಂದಾಜು ಸಿಗೋಕೆ ಇದೊಂದು ಸಾಕ್ಷಿ.
======================
ಬಳ್ಳಾರಿ ಖನಿಜ ಸಮೃದ್ಧ ಜಿಲ್ಲೆ.. ಒಂದೊಮ್ಮೆ ಮ್ಯಾಂಗನೀಸ್, ಮಗದೊಮ್ಮೆ ಕಬ್ಬಿಣದ ಅದಿರಿನಿಂದಾಗಿ ವಿಶ್ವ ಪ್ರಸಿದ್ದಿಯಾದ ಪ್ರದೇಶ...ಸಂಸ್ಕರಣೆಗೆ ವಿಪರೀತ ವೆಚ್ಚ ಆಗೋದ್ರಿಂದ ಬಳ್ಳಾರಿಯಲ್ಲಿ ಮ್ಯಾಂಗನೀಸ್ ಗಣಿಗಾರಿಕೆಯಿಂದ ಅಷ್ಟೊಂದು ಲಾಭ ಸಿಗ್ತಾ ಇರಲಿಲ್ಲ. ಆದ್ರೆ, ಅಲ್ಲಿ ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಅದಿರು ದಂಡಿದಂಡಿಯಾಗಿ ಸಿಗ್ತಾ ಇದೆ. ಬಳ್ಳಾರಿಯ ಕ್ವಾಲಿಟಿ ಅದಿರಿಗೆ ವಿಶ್ವಾದ್ಯಂತ ಭಾರೀ ಬೇಡಿಕೆಯಿದೆ. ಬೇಡಿಕೆಗೆ ಸರಿಸಮಾನವಾಗಿಯೇ ಜಿಲ್ಲೆಯಲ್ಲಿ ಇತ್ತೀಚಿನ ತನಕ ಅದಿರು ಗಣಿಗಾರಿಕೆ ಸ್ವಲ್ಪ ದೊಡ್ಡ ಮಟ್ಟದಲ್ಲೇ ನಡೀತಾ ಇತ್ತು.

ಕಬ್ಬಿಣದ ಅದಿರಿನ ಗಣಿಗಾರಿಕೆ ಅನ್ನೋದು ಬಳ್ಳಾರಿಗೆ ಇಂದು ನಿನ್ನೆಯದಲ್ಲ... ನಾಲ್ಕೈದು ದಶಗಳಿಂದಲೂ ಇಲ್ಲಿ ದೊಡ್ಡ ಮಟ್ಟದಲ್ಲೇ ಗಣಿಗಾರಿಕೆ ನಡೆಯುತ್ತಿದೆ. ಮೈನಿಂಗ್ ಮಾಫಿಯಾ ಅನ್ನೋದು ಅವತ್ತಿನಿಂದಲೇ ಈ ಜಿಲ್ಲೆಯಲ್ಲಿ ಭದ್ರವಾಗಿ ನೆಲೆಯೂರಿದೆ. ಅಕ್ರಮ ಗಣಿಗಾರಿಕೆ ಅನ್ನೋದು ಕೂಡಾ ಗಣಿಗಾರಿಕೆ ಅನ್ನೋದು ಬಳ್ಳಾರಿಯಲ್ಲಿ ಆರಂಭಗೊಂಡ ದಿನದಿಂದಲೂ ಇತ್ತು ಅಂದ್ರೆ, ಖಂಡಿತಾ ಉತ್ಪ್ರೇಕ್ಷೆ ಆಗಲಿಕ್ಕಿಲ್ಲ..ಆದ್ರೆ, ಬಳ್ಳಾರಿ ಗಣಿಗಾರಿಕೆ ಅಂದಾಗ ಅಕ್ರಮದ ಕಳಂಕ ಅಂಟಿಸಿದ್ದು, ತನಿಖೆಯ ಶೂಲಕ್ಕೆ ಸಿಲುಕಿಸಿದ್ದು, ಜಿದ್ದಿಗೆ ಬಿದ್ದವರಂತೆ ಜೈಲಿಗೆ ಅಟ್ಟಿ, ಅಲ್ಲೇ ಉಳಿಯುವಂತೆ ಮಾಡಿಸಿದ್ದು, ಮಾಜಿ ಸಚಿವ ಜನಾರ್ದನ ರೆಡ್ಡಿಯವರನ್ನು ಮಾತ್ರ.  (ಆದರೆ ಇವೆಲ್ಲವನ್ನೂ)
ಇದಕ್ಕೂ ಮೀರಿದ ಗಣಿ ಕರ್ಮಕಾಂಡವೊಂದು ಬಳ್ಳಾರಿಯಲ್ಲಿ ಇದೆಯಾ..? 
ಇದು ಕೋತಿ ಬೆಣ್ಣೆ ತಿಂದು ಮೇಕೆ ಮೂತಿಗೆ ಒರೆಸಿದ ಕಥೆಯಾ..? 
ಬಹಳಷ್ಟು ಜನರಿಗೆ ಗೊತ್ತಿರದ ಆ ಕಥೆಯ ಕಥಾ ನಾಯಕ ಯಾರು.? 

ಬಳ್ಳಾರಿ ಗಣಿಗಾರಿಕೆಯ ಕಳಂಕದಲ್ಲಿ ಓಬ್ಬರೇ ವ್ಯಕ್ತಿಯನ್ನು ಮಾತ್ರ ಇನ್ನಿಲ್ಲದಂತೆ ದೋಷಿ ರೂಪದಲ್ಲಿ ಚಿತ್ರಿಸಲಾಗುತ್ತಿದೆ. ಆದ್ರೆ, ಅದಕ್ಕೂ ಮುನ್ನ ಸುಮಾರು 50 ವರ್ಷ ಗಣಿಗಾರಿಕೆ ನಡೆಸಿದ, ಈಗಲೂ ನಡೆಸುತ್ತಿರುವ, ಚೀನಾ ಒಲಿಂಪಿಕ್ಸ್ ಸಮಯದಲ್ಲಾದ ಬೂಮ್ ಸಂದರ್ಭದಲ್ಲಿ ಚೀನಾಗೆ ಅತಿ ಹೆಚ್ಚು ಬಳ್ಳಾರಿ ಅದಿರು ರಫ್ತು ಮಾಡಿ ಕೋಟಿಗಳನ್ನು ಚಿಲ್ಲರೆ ಥರ ಎಣಿಸಿಕೊಂಡ ಕಂಪನಿಯೊಂದರ ಹೂರಣ ಇದುವರೆಗೂ ಬಯಲಾಗಿಲ್ಲ.. ಅದು ಅಷ್ಟು ಸುಲಭದಲ್ಲಿ ಬೆತ್ತಲಾಗುವ ಸಾಧಾರಣ ಕಂಪನಿಯೂ ಅಲ್ಲ..ವ್ಯವಸ್ಥಿತವಾಗಿ ಎಲ್ಲವನ್ನೂ ಮ್ಯಾನೇಜ್ ಮಾಡುವ ಶಕ್ತಿ ಅದಕ್ಕಿದೆ..

ಇವೆಲ್ಲವನ್ನೂ ಹೇಳುವ ವಿಸ್ತೃತ ತನಿಖಾ ವರದಿಯನ್ನು ತೆಹಲ್ಕಾ ಪತ್ರಿಕೆ ಇತ್ತೀಚೆಗೆ ಪ್ರಕಟಿಸಿದೆ. A missing link in the mining scam..?..ಅನ್ನೋ ಶೀರ್ಷಿಕೆಯಡಿ ಈ ವರದಿ ಪ್ರಕಟವಾಗಿದೆ. ಬಳ್ಳಾರಿ ಗಣಿಗಾರಿಕೆಯ ಮಿಸ್ಸಿಂಗ್ ಲಿಂಕ್ ಯಾವುದು.. ಅಕ್ರಮ ನಡೆಸಿಯೂ ಸಿಕ್ಕಿ ಬೀಳದಷ್ಟು ಚಾಣಾಕ್ಷ ನಡೆ ತೋರಿದ ಆ ಉದ್ಯಮಿ ಯಾರು..ಅವೆಲ್ಲಾ ಹೇಗೆ ಸಾಧ್ಯವಾಯ್ತು ಅನ್ನೋದು ಆ ವರದಿಯಲ್ಲಿದೆ.  ಅಲ್ಲಿ ಪ್ರಸ್ತಾಪಿಸಲಾದ ಆ ಕಂಪನಿ  ಮತ್ತೆ ಯಾರದ್ದೂ ಅಲ್ಲ.. ಅದು ದಿ ಬಲ್ಡೋಟಾ ಗ್ರೂಪ್ .. ಆ ಗ್ರೂಪ್​ನಲ್ಲಿ ಮುಖ್ಯವಾಗಿ ಕಾಣಿಸುವುದು ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಹುಲ್ ಬಲ್ಡೋಟ...

ಹಿಂದೊಂದು ಸಲ ಜನಾರ್ದನ ರೆಡ್ಡಿ ಈ ರಾಹುಲ್ ಬಲ್ಡೋಟನನ್ನೆ ಗಣಿ ವೀರಪ್ಪನ್ ಅಂತ ಕರೆದಿದ್ದರು ಅನ್ನೋದನ್ನ ಮರೆಯೋ ಹಾಗಿಲ್ಲ. ಅದನ್ನವರು ಹೇಳಿದ್ದು ರಾಜ್ಯದ ವಿಧಾನ ಪರಿಷತ್ತಿನಲ್ಲಿ. ಆದರೆ, ಯಾಕೋ ಅವತ್ತು ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯವರಾಗಲೀ, ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಯಾರೂ ಆ ಮಾತುಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ. ಗಣಿ ಉದ್ಯಮವನ್ನು ಆದ್ಯಂತವಾಗಿ ಅರ್ಥಮಾಡಿಕೊಂಡಿರುವವರೊಬ್ಬರ ಬಾಯಿಂದ ಬಂದ ಈ ಮಾತುಗಳು ಸತ್ಯವಿರಬಹುದು ಅಂತಲೂ ಯಾರಿಗೂ ಅನ್ನಿಸಿರಲೇ ಇಲ್ಲ. ಯಾರ್ಯಾರದ್ದೋ ಮಾತ್ಯಾಕೆ ಬಿಡಿ; ಅದಾದ ಒಂದೆರಡು ವರ್ಷಗಳ ನಂತರ, ಅಕ್ರಮ ಗಣಿಗಾರಿಕೆಯನ್ನು ಬುಡಸಮೇತ ಶೋಧಿಸಿಬಿಡುತ್ತೇವೆ ಅಂತ ಹೊರಟ ಲೋಕಾಯುಕ್ತ ಸಂಸ್ಥೆ ಕೂಡ ಜನಾರ್ದನ ರೆಡ್ಡಿಯವರಿಂದ ಈ `ಗಣಿ ವೀರಪ್ಪನ್` ಅನ್ನೋ ಬಿರುದು ಪಡೆದ ವ್ಯಕ್ತಿಯ ಜಾತಕಾನ ಜಾಲಾಡೋಕೆ  ಹೋಗಲೇ ಇಲ್ಲ. ಅದೇ ಇವತ್ತಿಗೂ ಯಾರಿಗೂ ಅರ್ಥವಾಗದ ನಿಗೂಢ.

ಅದೇನೇ ಇರಲಿ; ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಅನ್ನೋ ಮಾತು ಸುಳ್ಳಲ್ಲ. ಹಾಗಾಗಿ, ಬಲ್ದೋಟ ಕಂಪನಿಯ ಅವ್ಯವಹಾರಗಳೂ ಇದೀಗ ಬಯಲಾಗಿವೆ. ಲೋಕಾಯುಕ್ತ ಸಂಸ್ಥೆಯಾಗಲೀ, ಹಿರೇಮಠ್ ಅವರ ಸಮಾಜ ಪರಿವರ್ತನಾ ಸಮುದಾಯವಾಗಲೀ ಕೈಹಾಕಿ ಕೆದಕದಿದ್ದರೂ ಕೂಡ, ಈ ರಾಹುಲ್ ಬಲ್ಡೋಟಾ ಕಂಪನಿಯ ಅಕ್ರಮಗಳ ಅಧಿಕೃತ ಪುರಾವೆಗಳು ಸುಪ್ರೀಂ ಕೋರ್ಟ್​ ನೇಮಿಸಿರುವ ಸಿಇಸಿ ಎದುರು ಬಂದು ಬಿದ್ದಿವೆ. ತುಂಬಾ ಜತನದಿಂದ ಒಂದೊಂದು ವಿವರವನ್ನೂ ಹೆಕ್ಕಿ ತೆಗೆಯುವ ಈ ಕೆಲಸ ಮಾಡಿದ್ದು ಹೊಸಪೇಟೆಯ  ಕರ್ನಾಟಕ ಪರಿಸರ ಸಂರಕ್ಷಣಾ ಸಮಿತಿ..ಒಟ್ಟಾರೆ, ಬಲ್ಡೋಟಾ ಅಕ್ರಮ ಗಣಿಗಾರಿಕೆಗೆ ಬೇಕಾದ ಸಾಕ್ಷ್ಯಗಳೆಲ್ಲಾ ಈಗ ಸಿಇಸಿ ಮುಂದಿದೆ. ಆದರೂ ಯಾಕೆ ಸಿಇಸಿ ನಿಧಾನವಾಗಿದೆ ಅನ್ನೋದು, ಮತ್ತು ಯಾಕೆ ತನಿಖಾ ಸಂಸ್ಥೆಗಳು ಮಗುಮ್ಮಾಗಿ ಕೂತಿವೆ ಅನ್ನೋದು ಮನುಷ್ಯ ಮಾತ್ರರಿಗೆ ಅರ್ಥವಾಗದ ರಹಸ್ಯ.

ಇಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವುದು ಎಂಎಸ್​ಪಿಲ್ ಹಾಗೂ ಆರ್​ ಎಂಎಂಪಿಲ್ ಅನ್ನೋ ಎರಡು ಕಂಪನಿಗಳು.. ಈ ಎರಡೂ ಕಂಪನಿ ಬಲ್ಡೋಟಾ ಗ್ರೂಪ್​ಗೆ ಸೇರಿದ್ದು.

MSPL. ಅಂದ್ರೆ ಮಿನರಲ್ಸ್ ಸೇಲ್ಸ್ ಪ್ರೈವೇಟ್ ಲಿಮಿಟೆಡ್. ದೇಶದ ಅತಿ ದೊಡ್ಡ ಮೈನಿಂಗ್ ಕಂಪೆನಿ. ರಾಜ್ಯದಲ್ಲೂ ಸಾಕಷ್ಟು ಪ್ರಾಬಲ್ಯ ಹೊಂದಿದೆ. ನಮ್ಮಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದರ ಮೈನಿಂಗ್ ಬಾಹುಗಳಿವೆ.  MSPL ಕೇವಲ ಕಬ್ಬಿಣದ ಅದಿರು ಗಣಿಗಾರಿಕೆಯನ್ನಷ್ಟೇ ಮಾಡೋದಿಲ್ಲ.  ಶಿಪ್ಪಿಂಗ್, ಸ್ಟೀಲ್​, ಕೆಮಿಕಲ್ಸ್, ವಿಂಡ್ ಎನರ್ಜಿ, ಡೈಮಂಡ್ ಮತ್ತು ಗೋಲ್ಡ್ ಮೈನಿಂಗ್​ನಂತಹ ಉದ್ಯಮಗಳನ್ನೂ ನಡೆಸ್ತಾ ಇದೆ. ಕರ್ನಾಟಕದಲ್ಲಿ ಈ ಗ್ರೂಪ್​ ಆಫ್​ ಕಂಪನೀಸ್ನ ಮೈನಿಂಗ ಇತಿಹಾಸಕ್ಕೆ ಈಗಾಗಲೇ ನಾಲ್ಕು ದಶಕಗಳಾಗಿ  ಹೋಗಿವೆ. ​ ಅಂದರೆ, ಹೆಚ್ಚು ಕಡಿಮೆ ಜನಾರ್ದನ ರೆಡ್ಡಿಯವರು ಹುಟ್ಟೋದಿಕ್ಕೂ ಮುಂಚಿನಿಂದಲೇ ಗಣಿ ಅಗೆದು ದುಡ್ಡು ಬಗೆದುಕೊಳ್ತಿರೋ  ಕಂಪನಿ ಅದು.  ಮೈನಿಂಗ್​ ಬ್ಯುಸಿನೆಸ್​ನ ಎಲ್ಲಾ ಟ್ರಿಕ್​ಗಳೂ ಎಂಎಸ್​ಪಿಎಲ್ಗೆ ಕರತಲಾಮಲಕ... ಚೀನಾಕ್ಕೆ ಉತ್ಕೃಷ್ಟ ಅದಿರನ್ನು ರಫ್ತು ಮಾಡುವ ಪ್ರಮುಖ ಕಂಪೆನಿಯೇ MSPL. ಹಾಗಂತ ಆ ಕಂಪನಿಯ ವೆಬ್​ಸೈಟಿನಲ್ಲೇ ಇದೆ.

ಈ ದೈತ್ಯ MSPL ಕಂಪೆನಿಯ ಈಗಿನ ಚೇರ್​ಮನ್ ನರೇಂದ್ರ ಬಲ್ಡೊಟಾ.. ಅವ್ರ ಮಕ್ಕಳಾದ ರಾಹುಲ್ ಬಲ್ಡೋಟಾ ಹಾಗೂ ಶ್ರೇಣಿಕ್​ಕುಮಾರ್ ಬಲ್ಡೋಟಾ ಎಕ್ಸಿಕ್ಯೂಟಿವ್ ಡೈರೆಕ್ಟರ್ಸ್​. ನರೇಂದ್ರ ಬಲ್ಡೋಟಾ, FEMIದ ಅಧ್ಯಕ್ಷರು ಕೂಡಾ ಆಗಿದ್ರು. ಫೆಮಿ ಅಂದ್ರೆ, ಫೆಡರೇಷನ್ ಆಫ್​ ಮಿನರಲ್ ಇಂಡಸ್ಟ್ರೀಸ್​. ಐದು ವರ್ಷಗಳಿಂದ ಈ ಸ್ಥಾನದಲ್ಲಿದ್ದ ನರೇಂದ್ರ ಬಲ್ಡೋಟಾ, ಅತಿ ದೊಡ್ಡ ಲಾಬಿಯಿಸ್ಟ್​ ಆಗಿ ಬೆಳೆದ್ರು. ಭಾರತ ಸರ್ಕಾರ ಹಾಗೆಯೇ ಕರ್ನಾಟಕ ಸರ್ಕಾರಗಳಲ್ಲಿ ಯಾವುದೇ ಕೆಲಸವನ್ನೂ ಸಲೀಸಾಗಿ ಮಾಡಿಸಿಕೊಳ್ಳುವ ತಾಕತ್ತು ಅವರದ್ದು... ಇನ್ನು, ಇವ್ರ ಮಗ ರಾಹುಲ್ ಬಲ್ಡೋಟಾ ಈಗಿನ FEMI ಅಧ್ಯಕ್ಷರು. ಅಪ್ಪನಂತೆಯೇ ಮಗ..

ರಾಹುಲ್ ಬಲ್ಡೋಟಾ ಅಪ್ಪ ನರೇಂದ್ರ ಬಲ್ಡೊಟಾ ಸುಮಾರು 40 ವರ್ಷಗಳಿಂದ ಗಣಿ ಉದ್ಯಮದಲ್ಲಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಇವರ ಕಾರ್ಯಕ್ಷೇತ್ರ. ಸುತ್ತಮುತ್ತಲ ಸಾವಿರಾರು ಎಕರೆ ಭೂಮಿಯಲ್ಲಿ ಗಣಿಗಾರಿಕೆ ನಡೆಸಿದ್ದಾರೆ.. ನಡೆಸುತ್ತಿದ್ದಾರೆ.. ಗಣಿಗಾರಿಕೆಗೆ ಅನುಮತಿ ಪಡೆದು, ಸುತ್ತಲಿನ ಅರಣ್ಯವನ್ನು ಒತ್ತುವರಿ, ಅಕ್ರಮ ಗಣಿಗಾರಿಕೆ, ಪರಿಸರ ನಾಶ, ಅರಣ್ಯ ಸಂರಕ್ಷಣಾ ಕಾಯಿದೆಯ ಉಲ್ಲಂಘನೆ ಮುಂತಾದ ಗುರುತರ ಆರೋಪ, ಎಂಎಸ್​ಪಿಎಲ್ ಮೇಲಿದೆ.

MSPL ಅಂಗಸಂಸ್ಥೆಯೇ RMMPL - ಅಂದ್ರೆ ರಾಮಗಡ ಮಿನರಲ್ಸ್​  ಅಂಡ್ ಮೈನಿಂಗ್ ಪ್ರವೇಟ್ ಲಿಮಿಟೆಡ್​. ಈ ಕಂಪನಿ ಅಕ್ರಮದ ವಿಚಾರದಲ್ಲಿ MSPLನ್ನೂ ಮೀರಿಸುವಂಥದ್ದು.   ಇದ್ರ ಮೇಲೂ ಕಾನೂನು ಉಲ್ಲಂಘನೆ ಆರೋಪಗಳಿವೆ. ಈ ಎಂಎಸ್​ಪಿಎಲ್ ಹಾಗೂ ಆರ್​ ಎಂಎಂಪಿಎಲ್ ಕಂಪನಿ ಬೆಣ್ಣೆ ತಿಂದು ಇನ್ನೊಬ್ಬರ ಮೂತಿಗೆ ಒರೆಸಿದ ವಿಚಾರ, ಅಷ್ಟು ಸರಳವಾಗಿಲ್ಲ..  ಆದ್ರೆ ಇದಾವುದೂ ಇವತ್ತಿಗೂ ಯಾರ ಕಣ್ಣಿಗೂ ಬಿದ್ದಿಲ್ಲ.. ಬಿದ್ರೂ ಬೀಳದಂತೆ ನೋಡಿಕೊಳ್ಳಲಾಗ್ತಿದೆ.... ಇದೊಂದು ವ್ಯವಸ್ಥಿತ ಜಾಲ...ಆ ಜಾಲದ ಡೀಟೆಲ್ಸ್ ಈಗ ಸಿಇಸಿ ಮುಂದಿದೆ. ಅದು ಜನಶ್ರೀಗೂ ಸಿಕ್ಕಿದೆ.
===========================
ಇಷ್ಟೊಂದು ಅಕ್ರಮದ ಆರೋಪ ಇದ್ರೂ, ಬಲ್ಡೋಟಾ ಗ್ರೂಪ್​ಗೆ  ಗಣಿಗಾರಿಕೆಗಾಗಿ ನೀಡುವ 'ಪ್ರೆಸಿಡೆಂಟ್ಸ್ ನ್ಯಾಷನಲ್ ಸೇಫ್ಟಿ ಅವಾರ್ಡ್' ಹೇಗೆ ಸಿಕ್ತು ಅನ್ನೋದು ದೊಡ್ಡ ಮಿಸ್ಟರಿ.. ಇಲ್ಲೂ ಬಲ್ಡೋಟಾ ಲಾಬಿ ನಡೆದಿರಬಹುದೆಂಬ ಅನುಮಾನ ವಿದೆ. ಅದು ಹಾಗಿರ್ಲಿ. ಬಲ್ಡೋಟಾ ಕಂಪನಿ ಅಕ್ರಮಗಳ ಫುಲ್​ ಡೀಟೆಲ್ಸ್​ ಕೊಡ್ತೇವೆ.. ಅದಕ್ಕೂ ಮೊದಲು ಒಂದುಬ್ರೇಕ್
___________________________________________________________________________________________________________________________________



ಮೊದಲೇ ನಾನು ಹೇಳಿದ್ಹಾಗೆ, ಈ ಬಲ್ಡೋಟಾ, ಅಕ್ರಮ ಮಾಡಿ ಧಕ್ಕಿಸಿಕೊಳ್ಳೋ ಅಸಾಮಿ.. ಅಷ್ಟೊಂದು ಪ್ರಭಾವ ಅವರಿಗೆ ಕೇಂದ್ರ ಮತ್ತು ರಾಜ್ಯಗಳೆರಡರ ಮೇಲೂ ಇವೆ. ಬಲ್ಡೊಟಾ ಕಂಪನಿಗಳು ಬಳ್ಳಾರಿ ಜಿಲ್ಲೆಯ
ವ್ಯಾಸನಕೆರೆ ಹಾಗೂ ರಾಮಗುಡ್ಡದಲ್ಲಿ ನಡೆಸಿದ ಅಕ್ರಮಗಳು ಒಂದೆರಡಲ್ಲ... ನಿರಂತರವಾಗಿ ನಾಲ್ಕು ದಶಕಗಳ ಕಾಲ ಇಲ್ಲಿ ಭೂಮಿಯ ಮೇಲೆ ಅತ್ಯಾಚಾರ ನಡೆದಿದೆ... ವಿಶೇಷ ಅಂದ್ರೆ ಎಲ್ಲವೂ ಗುಪ್ತ್​ ಗುಪ್ತ್​...
=====================
ನಂ.1. ವ್ಯಾಸನಕೆರೆ ವಿಲೇಜ್ - ಲೀಸ್ ನಂಬರ್ 1801

ಹೊಸಪೇಟೆ ಪಟ್ಟಣದ ಸಮೀಪದಲ್ಲಿರುವ ಪುಟ್ಟ ಗ್ರಾಮವೇ ವ್ಯಾಸನಕೆರೆ. ಒಂದು ಕಾಲದಲ್ಲಿ ಇದು ಹಚ್ಚ ಹಸಿರಿನ ದಟ್ಟ ಕಾನನ. ಯಾವಾಗ ಇಲ್ಲಿನ ನೆಲದಲ್ಲಿ ಕಪ್ಪು ಚಿನ್ನ ಇದೆ ಅಂತಾ ತಿಳೀತೋ ಇಲ್ಲಿಗೆ ಮೊದಲು ಲಗ್ಗೆ ಇಟ್ಟದ್ದೇ ಬಲ್ಟೋಟಾ... ಈ ಗ್ರಾಮದಲ್ಲಿ  ಒಟ್ಟು 4 ಕಡೆಗಳಲ್ಲಿ ಗಣಿಗಾರಿಕೆ ನಡೆಸಲು ಬಲ್ಡೊಟಾ ಕಂಪನಿ ಅನುಮತಿ ಪಡೆದಿದೆ.
ಸರ್ವೇ ನಂಬರ್ 1, 4, 5 ಮತ್ತು 6ರಲ್ಲಿ ಮೈನಿಂಗ್ ಲೀಸ್ ಪಡೆದಿದೆ. ಆದ್ರೆ ವ್ಯಾಸನಕೆರೆ ಗ್ರಾಮದ ಗಣಿ ಲೀಸ್ ಮೂಲತಃ MSPLಗೆ ಸೇರಿದ್ದಲ್ಲ. 1952ರಲ್ಲಿ ಬಳ್ಳಾರಿಯ ಲೇಟ್ ಕೆ. ನಾರಾಯಣಯ್ಯ ಅನ್ನೋರು ಈ 858 ಎಕರೆ ಗಣಿ ಪ್ರದೇಶದ ಗುತ್ತಿಗೆ ಪಡೆದಿದ್ರು, ಅದೂ ಕೇವಲ 10 ವರ್ಷಕ್ಕೆ. ನಂತ್ರ 19-04-1962ರಲ್ಲಿ MSPLಗೆ ಈ ಗುತ್ತಿಗೆ ವರ್ಗಾವಣೆಯಾಯ್ತು. 14-11-1962ರಿಂದ ಕಾರ್ಯಗತವಾಗುವಂತೆ 20 ವರ್ಷಗಳಿಗೆ ಗುತ್ತಿಗೆ ನವೀಕರಣವೂ ಆಯ್ತು. ಹಾಗೆಯೇ 14-1-1982ರಂದು 2ನೇ ಬಾರಿಗೆ ಮತ್ತೆ 20 ವರ್ಷಗಳಿಗೆ ನವೀಕರಣಗೊಂಡಿತು. ನಂತ್ರ 09-06-2003ರಲ್ಲಿ ಮೂರನೇ ಸರ್ತಿ 20 ವರ್ಷಗಳಿಗೆ ನವೀಕರಣಗೊಂಡಿತು. ಮೂರು ಬಾರಿ ನವೀಕರಣಗೊಂಡಾಗಲೂ 858 ಎಕರೆಯಲ್ಲಿ ಮಾತ್ರ ಗಣಿಗಾರಿಕೆಗೆ ಅನುಮತಿ ನೀಡಲಾಗಿತ್ತು. ಆದ್ರೆ MSPL ಒಟ್ಟು 1015 ಎಕರೆಯಲ್ಲಿ  ರಾಜಾರೋಷವಾಗಿ ಗಣಿಗಾರಿಕೆ ನಡೆಸಿದೆ.. ಅಂದ್ರೆ ಪಕ್ಕದ ಮೀಸಲು ಅರಣ್ಯವನ್ನ ಒತ್ತುವರಿ ಮಾಡಿಕೊಂಡು ಅದಿರು ಲೂಟಿ ನಡೆದಿದೆ...ಇಲ್ಲಿ ಬಲ್ಡೋಟಾ ಕಡೆಯಿಂದ ಸುಮಾರು 200 ಎಕರೆ ಅರಣ್ಯ ಒತ್ತುವರಿ ಆಗಿದೆ. ತುರ್ತಾಗಿ ನೋಡಿ ಸರ್ವೇ ಮಾಡಿ  ಅಂತಾ ಅಂದಿನ ಬಳ್ಳಾರಿ ಅರಣ್ಯ ಸಂರಕ್ಷಣಾಧಿಕಾರಿಯವ್ರು ಅಂದಿನ ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುತ್ತಯ್ಯ ಅವರಿಗೆ ಸೆಪ್ಟೆಂಬರ್​ 29, 2009ರಂದೇ ಪತ್ರ ಬರೆದಿದ್ದರು. (ದಾಖಲೆ ಪೇಜ್ 77)

ಈ ಸಂಬಂಧ ದೂರು ಹಾಗೂ ದಾಖಲೆಗಳನ್ನು ಸಿಇಸಿಗೆ ಸಲ್ಲಿಸಲಾಗಿದೆ.

1962ನೇ ಇಸ್ವಿಯಿಂದ ಇವತ್ತಿನ ತನಕವೂ ಲೀಸ್ ಪಡೆದ ಜಾಗದಲ್ಲಷ್ಟೇ ಅಲ್ದೇ ಒತ್ತುವರಿ ಮಾಡಿದ ಪ್ರದೇಶದಲ್ಲೂ ಅವ್ಯಾಹತವಾಗಿ ಅಕ್ರಮವಾಗಿ ಗಣಿಗಾರಿಕೆ ನಡೆದಿದೆ... ವ್ಯಾಸನಕೆರೆ ಗ್ರಾಮದಲ್ಲಿ ಲೀಸ್ ಪಡೆದ ಪ್ರದೇಶದ ಪೂರ್ವ ದಿಕ್ಕಿನಲ್ಲಿ ಅರಣ್ಯ ಒತ್ತುವರಿಯಾಗಿದ್ದು, ಇದು ಅರಣ್ಯ ಸಂರಕ್ಷಣ ಕಾಯ್ದೆ 1980ರ ಉಲ್ಲಂಘನೆಯಾಗಿದೆ...

ಸರ್ವೆ ಮಾಡಲು ನಿರ್ದೇಶನವಿದ್ದರೂ  ಸರ್ವೇ ಮಾಡಲು ಅಧಿಕಾರಿಗಳಿಗೆ ಬಲ್ಡೋಟಾ ಕಂಪೆನಿ ಅವಕಾಶವನ್ನೇ ಕೊಟ್ಟಿಲ್ಲ ಅನ್ನೋದು ಇನ್ನೊಂದು ಗಮನಾರ್ಹ ವಿಷಯ... ಇದಕ್ಕೆ ಮೈನ್ಸ್ ಅಂಡ್ ಜಿಯಾಲಜಿ ಡಿಪಾರ್ಟ್​ಮೆಂಟ್​ಗೆ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥ ಡಾ. ಯು.ವಿ. ಸಿಂಗ್ ಬರೆದಿದ್ದ ಪತ್ರವೇ ಸಾಕ್ಷಿ... ವ್ಯಾಸನಕೆರೆ ಸರ್ವೇ ನಂಬರ್ 1 ಹಾಗೂ ಕಲ್ಲಹಳ್ಳಿ ಸರ್ವೇ ನಂಬರ್ 97ರ ಮಧ್ಯೆ ಗಡಿಯನ್ನು ಗುರುತಿಸುವ ಯಾವುದೇ ಕುರುಹು ಇಲ್ಲ ಎಂದು ಯು.ವಿ.ಸಿಂಗ್ ದಾಖಲಿಸಿದ್ದಾರೆ....

ಗಣಿಗಾರಿಕೆ ಗಡಿ ಗುರುತಿಸುವ ಕಲ್ಲುಗಳನ್ನು ಬಲ್ಡೋಟಾ ಕಂಪನಿ ಕಿತ್ತೆಸೆದಿದೆ... ಅಲ್ದೇ ವ್ಯಾಸನಕೆರೆ ಗ್ರಾಮದ ಗಡಿ ಗುರುತಿಸುವ ಕಲ್ಲನ್ನೂ ಸಹ ಕಿತ್ತು ಪಕ್ಕದ ಕಲ್ಲಹಳ್ಳಿ ಗ್ರಾಮದಲ್ಲಿ ನಡೆಲಾಗಿದೆ... ಅಂದ್ರೆ ಕಲ್ಲಹಳ್ಳಿ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನ ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಲಾಗಿದೆ. ಫಾರೆಸ್ಟ್ ಕನ್ಸರ್ವೇಶನ್ ಆಕ್ಟ್ ಪ್ರಕಾರ ಅರಣ್ಯ ಇಲಾಖೆಯ ಕ್ಲಿಯರೆನ್ಸ್​ ಕೂಡಾ ಪಡೆಯದೆ ಅವ್ಯಾಹತವಾಗಿ ಗಣಿ ಲೂಟಿ ಮಾಡಲಾಗಿದೆ... ಇಲ್ಲಿ ಒತ್ತುವರಿಯಾಗಿರೋದು ಒಂದೆರಡು ಎಕರೆಯಲ್ಲ... ಬರೋಬ್ಬರಿ 200 ಎಕರೆ. ಅರಣ್ಯ ಒತ್ತುವರಿ ಮಾಡಿರುವುದು MMRD ಆಕ್ಟ್ ಹಾಗೂ ಫಾರೆಸ್ಟ್ ಕನ್ಸರ್ವೇಶನ್ ಆಯ್ಟ್ ಗಳ ಸ್ಪಷ್ಟ ಉಲ್ಲಂಘನೆ. ಹೀಗಾಗಿ ರಾಜ್ಯದ ಬೊಕ್ಕಸಕ್ಕೆ ಸಹಜವಾಗಿಯೇ ನಷ್ಟ ಆಗಿದೆ...

MSPLನ ಎಷ್ಟೇ ಒತ್ತಡವಿದ್ರೂ ಪಟ್ಟು ಬಿಡದ ಜಿಲ್ಲಾ ಅರಣ್ಯಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು 16-07-2010ರಲ್ಲಿ ಪ್ರಾಥಮಿಕ ಸರ್ವೇಗೆ ಮುಂದಾದ್ರು. ಆದ್ರೆ ತಮ್ಮ ವ್ಯಾಸನಕೆರೆ ಗಣಿ ಪ್ರದೇಶದಲ್ಲಿ ಕಾಲಿಡೋದಿಕ್ಕೂ ಕೂಡಾ ಅಧಿಕಾರಿಗಳಿಗೆ MSPL ಅವಕಾಶ ಕೊಡಲಿಲ್ಲ... ಆದ್ರೂ,  MSPL ಲೀಸ್ ಪಡೆದಿದ್ದ ಜಾಗ ಹಾಗೂ ಫಾರೆಸ್ಟ್ ಲ್ಯಾಂಡ್ನ​ ನಕ್ಷೆಗಳನ್ನ ತೂಗಿ ನೋಡಿದರೆ ಸಾಕು, 200 ಎಕರೆ ಸ್ವಾಧೀನವಾಗಿರುವುದು ಸ್ಪಷ್ಟವಾಗಿ ಗೊತ್ತಾಗಿಬಿಡತ್ತೆ.

ಇದು ಒಂದು ರೀತಿಯ ಅಕ್ರಮವಾದ್ರೆ, ಮಿನರಲ್ ವೇಸ್ಟ್​ ಡಂಪ್ ಮಾಡಲು ಅರಣ್ಯದ ಜಾಗವನ್ನ ಕಬಳಿಕೆ ಮಾಡಿದ್ದು ಮತ್ತೊಂದು ಅಕ್ರಮ. ಇದನ್ನ ಅರಣ್ಯಾಧಿಕಾರಿಗಳು 14-12-2008ರಲ್ಲಿ ದಾಖಲಿಸಿದ್ರು... ವೇಸ್ಟ್ ಡಂಪಿಂಗ್ ಯಾರ್ಡ್​ ಆಗಿ ಕಲ್ಲಹಳ್ಳಿಗೆ ಹೊಂದಿಕೊಂಡ 20.53 ಅರಣ್ಯ ಪ್ರದೇಶವನ್ನ ಬಳಸಿಕೊಂಡದ್ದು, ಮೈನಿಂಗ್ ಲೀಸ್ ಒಪ್ಪಂದದ ಉಲ್ಲಂಘನೆಯಾಗಿತ್ತು. 2 ವಾರದೊಳಗೆ ಅದನ್ನು ತೆರವುಗೊಳಿಸಬೇಕು ಅಂತ ಡೆಪ್ಯುಟಿ ಕನ್ಸರ್ವೇಟರ್ 19-12-2007ರಂದು ಆದೇಶ ಕೂಡಾ ಕೊಟ್ಟಿದ್ದ್ರು.

MSPL ಬರೇ ಇಷ್ಟಕ್ಕೇ ಸುಮ್ಮನಾಗ್ಲಿಲ್ಲ. ಅವ್ಯಾಹತ ಗಣಿಗಾರಿಕೆಯಿಂದ ಉತ್ಪನ್ನವಾದ ಲಕ್ಷ ಲಕ್ಷ ಟನ್ ಕಬ್ಬಿಣದ ಅದಿರನ್ನ ಸಂಗ್ರಹಿಸಲು ಒಂದು ಜಾಗಬೇಕಿತ್ತು. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶ ಮೇಲೆ ಈ ದುರುಳ ಕಂಪೆನಿಯ ಕಣ್ಣು ಬಿತ್ತು.. ಅಲ್ಲಿವರೆಗೆ ಜನರ ಕಣ್ಮಣಿಯಾಗಿದ್ದ ಟಿ.ಬಿ ಡ್ಯಾಂ ಜಲಾನಯನ ಪ್ರದೇಶ, ಬೃಹತ್ ಪ್ರಮಾಣದ ಅದಿರಿನ ದಾಸ್ತಾನು ಕಟ್ಟೆಯಾಯ್ತು... ಮಳೆ ಬಂದಾಗ ನೀರಿನೊಂದಿಗೆ ಅದಿರಿನ ಕಣಗಳೂ ಟಿಬಿ ಡ್ಯಾಂ ಸೇರಿದವು. . ಅಮೂಲ್ಯ ನೀರು ಗಬ್ಬೆದ್ದುಹೋಯ್ತು.  ಅಣೆಕಟ್ಟೆಯಲ್ಲಿ ಹೂಳು ತುಂಬಿ ಹೋಯ್ತು.  ಇಡೀ ವಾತಾವರಣವೇ ಹಾಳಾಗಿಹೋಯ್ತು...

ಇನ್ನು, ಡ್ಯಾಂ ಹತ್ತಿರ ಡಂಪ್ ಮಾಡುವ ಅದಿರನ್ನು ಸಾಗಿಸಿದ್ದರಿಂದ ಉಂಟಾದ ಧೂಳು ಇಡೀ ಪ್ರದೇಶದ ಅರಣ್ಯ ಹಾಗೂ ಜಲ ಮೂಲವನ್ನೂ ಹಾಳು ಮಾಡಿತು.. ಈ ಮೂಲಕ MSPL ಭಾರೀ ಪ್ರಮಾಣದ ಪರಿಸರ ಮಾಲಿನ್ಯಕ್ಕೆ ಕಾರಣವಾಯ್ತು...

MSPLನಿಂದ 200 ಎಕರೆ ಜಮೀನು ಒತ್ತುವರಿಯಾಗಿರುವ ಬಗ್ಗೆ ಹೊಸಪೇಟೆಯ ಪರಿಸರ ಸಂರಕ್ಷಣಾ ಸಮಿತಿಯು ಕೇಂದ್ರದ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ದಾಖಲೆ ಸಹಿತ ದೂರು ನೀಡಿದೆ. ಜೊತೆಗೆ ವಿಎಂಪಿ ಲಿಮಿಟೆಡ್, ಟ್ರಿಡೆಂಟ್ ಮಿನರಲ್ಸ್, ಎಸ್​.ಬಿ. ಮಿನರಲ್ಸ್ ವಿರುದ್ಧವೂ ದೂರು ದಾಖಲಾಗಿದೆ. ಈ ದೂರಿನ ಬಗ್ಗೆ ರಾಜ್ಯ ಅರಣ್ಯ ಇಲಾಖೆಯ ಮುಖ್ಯ ಕನ್ಸರ್ವೇಟರ್ ಆಫೀಸರ್​ಗೆ ಪತ್ರ ಬರೆದ ಕೇಂದ್ರ ಪರಿಸರ ಸಚಿವಾಲಯದ ಅಧಿಕಾರಿ ಎನ್​.ಎಸ್​. ಮುರಳಿ, ತನಿಖೆ ನಡೆಸುವಂತೆ ಫೆಬ್ರವರಿ 4, 2010ರಂದು ಆದೇಶ ಕೂಡ ಕೊಟ್ಟಿದ್ದ್ರು.

ಇದಷ್ಟೇ ಅಲ್ದೇ ಮಾನ್ಯ ಸರ್ವೋಚ್ಛ ನ್ಯಾಯಲಯ ರಚಿಸಿದ್ದ ಎಂಪವರ್ ಕಮಿಟಿ ಕೂಡಾ, MSPL ಅಕ್ರಮದ ಬಗ್ಗೆ ಬಂದಿರುವ ದೂರುಗಳನ್ನಾಧರಿಸಿ, ತಕ್ಷಣವೇ ಸಿಇಸಿ ಅಧಿಕಾರಗಳನ್ನು ಕಳುಹಿಸಿ ಸರ್ವೇ ಮಾಡಲು ಸೂಚಿಸಿತ್ತು...

ಬಳ್ಳಾರಿ ವಿಭಾಗದ ಡೆಪ್ಯುಟಿ ಕನ್ಸರ್ವೇಟರ್ ಆಫೀಸರ್ ಟಿ.ವಿ. ಶ್ರೀನಿವಾಸ್, ಗಡಿ ಉಲ್ಲಂಘನೆ ಆಗಿರುವುದು ನಿಜ ಅಂತ ಕೇಂದ್ರಕ್ಕೆ ವರದಿ (Mention date) ಕೊಟ್ಟಿದ್ದ್ರು... ವ್ಯಾಸನಕೆರೆ ಸರ್ವೇ ನಂಬರ್ 1 ಹಾಗೂ ಕಲ್ಲಹಳ್ಳಿ ಸರ್ವೇ ನಂಬರ್ 97ರ ಮಧ್ಯೆ ಯಾವುದೇ ಗಡಿ ಗುರುತು ಇಲ್ಲ ; ಎಲ್ಲವನ್ನೂ MSPLನವರೂ ಧ್ವಂಸಗೊಳಿಸಿದ್ದಾರೆ; ಇದು ಅರಣ್ಯ ಕಾಯ್ದೆಯ ಉಲ್ಲಂಘನೆ ಅಂತ ಕೇಂದ್ರಕ್ಕೆ ವರದಿ ನೀಡಿದ್ರು... ಈ ಪ್ರದೇಶದ ಸರ್ವೇ ಮಾಡೋಕೆ ಬಲ್ಡೋಟಾ ಕಂಪನಿಯವರು ಕಳೆದ ನಾಲ್ಕು ವರ್ಷಗಳಿಂದಲೂ ಬಿಟ್ಟಿಲ್ಲ ಅಂತಲೂ ಅವರು ತಮ್ಮ ವರದಿಯಲ್ಲಿ ಬರೆದಿದ್ದ್ರು. ಮೈನಿಂಗ್ ಗುತ್ತಿಗೆ ಪ್ರದೇಶಗಳ ಗಡಿ ಗುರುತಿಸೋದಿಕ್ಕೆ ಸಮಗ್ರ ತನಿಖೆ ಅಗತ್ಯವಿದೆ ಅನ್ನೋ ಸಲಹೆಯನ್ನೂ ಶ್ರೀನಿವಾಸ್ ಕೊಟ್ಟಿದ್ದ್ರು...

ಇನ್ನು, ಗಣಿ ಅಕ್ರಮದ ಬಗ್ಗೆ ತನಿಖೆಗೆ ಮುಂದಾದ ಲೋಕಾಯುಕ್ತರಿಗೂ ಶಾಕ್ ಕಾದಿತ್ತು...ಒಂದು ವಿಚಿತ್ರ ಅಂದ್ರೆ, ಇದೇ ವ್ಯಾಸನಕೆರೆ ಮೈನಿಂಗ್​ನಿಂದ ಒಂದು ಗಡಿಕಲ್ಲು ನೇರ ತುಂಗಭದ್ರಾ ಜಲಾಶಯದ ಒಳಗಿತ್ತು.  ಟಿ.ಬಿ. ಡ್ಯಾಂನಲ್ಲಿ ನಡೆದಿರುವ ಒತ್ತುವರಿ ಹಾಗೂ ಅಕ್ರಮವನ್ನ ಪತ್ತೆ ಹಚ್ಚೋದಿಕ್ಕೆ ಲೋಕಾಯುಕ್ತ ಅಧಿಕಾರಿಗಳು 6 ತಿಂಗಳ ಕಾಲ ಕಾಯಬೇಕಾಯ್ತು.. ಯಾಕಂದ್ರೆ ಜಲಾಶಯದ ನೀರು ಕಡಿಮೆಯಾಗುವವರೆಗೂ ಗಡಿಕಲ್ಲು ಗುರುತಿಸೋಕೆ ಸಾಧ್ಯ ಆಗೋಹಾಗಿರ್ಲಿಲ್ಲ. ಆದ್ರೆ ಲೋಕಾಯುಕ್ತರಿಗೆ ಕೊನೆಗೂ ನಿರಾಸೆ ಕಾದೇ ಇತ್ತು. ಯಾಕಂದ್ರೆ ಮಾಡಿದ ಅಕ್ರಮವೆಲ್ಲವೂ ಜಲಾಶಯದ ನೀರಿನಲ್ಲಿ ಲೀನವಾಗಿತ್ತು. ಇದು ಬಲ್ಡೋಟಾ ಎಂಬ ಚಾಣಾಕ್ಷನ ತಾಕತ್ತು.. ಅಧಿಕಾರಿಗಳನ್ನು ದಾರಿ ತಪ್ಪಿಸೋದ್ರಲ್ಲಿ ಬಲ್ಡೋಟ ನಿಸ್ಸೀಮ. ಹೀಗಾಗಿಯೇ 40 ವರ್ಷಗಳಿಂದ ಅಕ್ರಮ ಗಣಿಗಾರಿಕೆಯನ್ನು ಯಾವುದೇ ಎಗ್ಗಿಲ್ಲದೆ ನಡೆಸಲು ಸಾಧ್ಯವಾಗಿದೆ ರಾಹುಲ್ ಬಲ್ಡೋಟಾಗೆ.

ಇನ್ನು, MSPLಗೆ ಅಕ್ರಮದ ಜೊತೆ ದರ್ಪವೂ ಜೋರಾಗಿಯೇ ಇದೆ. ವ್ಯಾಸನಕೆರೆ ಗಣಿ ಪ್ರದೇಶದ ಅಕ್ಕಪಕ್ಕದಲ್ಲಿ ವಿ.ನಾಗ್ ಹಾಗೂ ಎಸ್​.ಬಿ. ಮಿನರಲ್ಸ್ ಎಂಬ ಮೈನಿಂಗ್ ಕಂಪೆನಿಗಳಿವೆ. ತಮ್ಮ ಪ್ರಭಾವವನ್ನು ಬಳಸಿಕೊಂಡ MSPL, ಸರ್ಕಾರಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ನೆರೆಹೊರೆಯ ಮೈನಿಂಗ್ ಮಾಲೀಕರನ್ನ ಹೆದರಿಸುವ ಕೆಲಸವನ್ನೂ ಮಾಡಿದೆ. ಹಾಗಾಗೇ ಅಲ್ಲಿನ ಜನ MSPL ಮುಖ್ಯಸ್ಥರನ್ನ ಮೈನ್ಸ್ ವೀರಪ್ಪನ್ ಅಂತಲೇ ಕರೆಯೋದು
=====================
MSPL ಅಕ್ರಮಗಳು, ದೌರ್ಜನ್ಯಗಳು ಇಷ್ಟಕ್ಕೇ ಮುಗಿಯೋಲ್ಲ. ರಾಮಗಡ ಮೈನಿಂಗ್ ಅನ್ನೋ ಉತ್ಕೃಷ್ಟ ಗಣಿಯನ್ನೂ ಕೂಡ ತನ್ನ ತೆಕ್ಕೆಗೆ ತೆಗೆದುಕೊಳ್ಳೋಕೆ ಬಲ್ಡೋಟಾ ಎಂತೆಂತಹ ಕಸರತ್ತು ಮಾಡಿದ್ರು ಅನ್ನೋದು ಇನ್ನೊಂದು ದೊಡ್ಡ ಕಥೆ. ಆ ಕಥೆ, ಒಂದು ಬ್ರೇಕ್ ಅದ್ಮೇಲೆ...
_________________________________________________________________________________________________________________________




ಲೋಕಾಯುಕ್ತರಿಂದ ಹಿಡಿದು ಗಣಿ, ಭೂವಿಜ್ಞಾನ ಹಾಗೂ ಅರಣ್ಯಾಧಿಕಾರಿಗಳ ತನಕ ಎಲ್ಲರ ಕಣ್ಣಿಗೂ ಮಣ್ಣೆರಚಿ, ದಾರಿ ತಪ್ಪಿಸಿ ತಮ್ಮ ಪಾಡಿಗೆ ತಾವು ಆರಾಮಾಗಿ ಬೇಕುಬೇಕಾದ ಕೆಲಸ ಮಾಡಿಕೊಳ್ಳೋದ್ರಲ್ಲಿ ಬಲ್ದೋಟ ಅದೆಷ್ಟು ಎಕ್ಸ್  ಪರ್ಟ್ ಅನ್ನೋದು ಈಗಾಗ್ಲೇ ನಿಮಗೆ ಅರ್ಥ ಆಗಿರಬಹುದು.ಅದಕ್ಕೆ ಇನ್ನಷ್ಟು ಪುರಾವೆ ಬೇಕಿದ್ದ್ರೆ, ಅವ್ರು ಅದು ಹೇಗೆ  ದಾಲ್ಮಿಯಾ ಸಿಮೆಂಟ್ಸ ಕಂಪನಿಯ ರಾಮಗಡ ಮೈನಿಂಗನ್ನ ತಮ್ ವಶಕ್ಕೆ ತಗೊಂಡ್ರು ಅನ್ನೋ ಈ ಕಥೆ ನೋಡಿ.
======================
2. ರಾಮಗಡ ಮಿನರಲ್ಸ್ - ಮೈನಿಂಗ್ ಲೈಸೆನ್ಸ್ ನಂಬರ್ ML 2451

ಈ RMMPL ಕಥೆಯನ್ನ ನಿಮಗೆ ಹೇಳಲೇ ಬೇಕು. ಕಥೆ ಹೇಳೋಕೆ  ಮುಂಚೆ, ಈ ಕಂಪನಿ ಮಾಡಿರೋ  ಒಂದಿಷ್ಟು ಘನಂದಾರೀ ಕೆಲಸಗಳ ಪಟ್ಟಿ ಕೇಳಿಸ್ಕೊಳ್ಳಿ:

ಈ RMMPL ಅಂದ್ರೆ, ರಾಮಗಡ ಮಿನರಲ್ಸ್ ಅಂಡ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಅಂತ. ಇದೂ ಕೂಡಾ ಬಲ್ಡೋಟಾ ಒಡೆತನದ ಕಂಪನಿ.... ಮೈನಿಂಗ್ ಲೈಸೆನ್ಸ್ ನಂಬರ್ ML 2451 ಮೂಲಕ ಸಂಡೂರು ಬಳಿಯಿರೋ ರಾಮಗಡ ಪ್ರದೇಶದಲ್ಲಿ ಗಣಿ ಗುತ್ತಿಗೆ ಪಡೆದಿರೋ RMMPL, ಇಲ್ಲೂ ಕೂಡಾ 331 ಹೆಕ್ಟೇರ್​ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮಾಡ್ತಿದೆ... ಇಲ್ಲಿಯೂ ಅರಣ್ಯ ಒತ್ತುವರಿ ಅವ್ಯಾಹತವಾಗಿ ನಡೆದಿದೆ... ಹೀಗಾಗಿ ಹಲವು ಅರಣ್ಯ ಮೊಕದ್ದಮೆಗಳು ದಾಖಲಾಗಿವೆ.. ಸಂಡೂರು ವಲಯ ಅರಣ್ಯಾಧಿಕಾರಿಗಳು ಈ ಸಂಬಂಧ RMMPL ಮೇಲೆ ಚಾರ್ಜ್​ಶೀಟ್​ ಕೂಡಾ ಸಲ್ಲಿಸಿದ್ದಾರೆ...

ಸರ್ಕಾರಕ್ಕೆ ಸೇರಿದ ಅರಣ್ಯ ಪ್ರದೇಶದಲ್ಲಿ ಈ ಕಂಪನಿ ಗಣಿ ತ್ಯಾಜ್ಯ ಸುರಿದಿತ್ತು... ಇಲಾಖೆ ವ್ಯಾಪ್ತಿಯ ಜಾಗದಲ್ಲಿ ಮಣ್ಣು ಗುಡ್ಡೆ ಹಾಕಿದ RMMPL, ದಾರಿಯನ್ನೇ ಬಂದ್ ಮಾಡಿತ್ತು... ಅನುಮತಿ ಇಲ್ಲದೆ ಅದಿರನ್ನು ಸಾಗಿಸುವುದರ ಜೊತೆಗೆ ಅರಣ್ಯ ವ್ಯಾಪ್ತಿಯಲ್ಲಿ ಆಳವಾದ ಗುಂಡಿ ತೋಡಿಟ್ಟಿತ್ತು... ಸಾಲದ್ದಕ್ಕೆ, ತಮ್ಮ ಸ್ಟಾಕ್​ ಯಾರ್ಡ್​ನಲ್ಲಿ ಅಕ್ರಮವಾಗಿ ಅದಿರು ದಾಸ್ತಾನು ಮಾಡಿಟ್ಟುಕೊಂಡಿತ್ತು.....

ಅದೊಂದ್ಕಡೆ ಇರ್ಲಿ ಬಿಡಿ; ಈ ಬಲ್ದೋಟ ಕಂಪನಿ ಎಂಥಾ ಪಾಕಡಾ ಕಂಪ್ನಿ ಅಂದ್ರೆ, ತನ್ ಕೈಗೆ ಲೈಸೆನ್ಸ್ ಬರೋಕೂ ಮುಂಚೆಯೇ RMMPLಗೆ ಲಗ್ಗೆ ಹಾಕಿ ಅಲ್ಲಿ ಲೂಟಿ ಹೊಡೆಯೋಕೆ ತಯಾರಿ ಮಾಡ್ಕೊಂಡು ಬಿಟ್ಟಿತ್ತು. ಲೈಸೆನ್ಸ್ ಸರಂಡರ್ ಮಾಡಿದ್ದ ದಾಲ್ಮಿಯಾ ಮಿನರಲ್ಸ್​ನ ಗಣಿ ಪ್ರದೇಶದಲ್ಲಿ ಅನುಮತಿಯಿಲ್ಲದೇ RMMPLನ ಸೆಕ್ಯುರಿಟಿ ಗಾರ್ಡ್​ ನೇಮಕ ಮಾಡಲಾಗಿತ್ತು.  2001ರಿಂದಲೇ ಅಲ್ಲಿ ಯಾರು ಇಲ್ಲ ಅನ್ನೋದನ್ನ ನೋಡ್ಕೊಂದ ರಾಹುಲ್ ಬಲ್ಡೋಟಾ, ಲೈಸೆನ್ಸ್ ಇಲ್ಲದೆಯೇ ಅಲ್ಲಿ ಗಣಿಗಾರಿಕೆ ನಡೆಸೋಕೆ ಶುರು ಮಾಡಿದ್ದ್ರು... ಇಂಥ ಹಲವು ಗಂಭೀರ ಅಪರಾಧಗಳನ್ನ ರಾಮಗಡ ಮಿನರಲ್ಸ್ ಮಾಡಿದೆ...

3. ದಾಲ್ಮಿಯಾ ಮಿನರಲ್ಸ್ - ಲೈಸೆನ್ಸ್ ನಂಬರ್  ML 2010

ಅತ್ತ MSPL ವ್ಯಾಸನಕೆರೆಯಲ್ಲಿ ಅಕ್ರಮದ ದಾಪುಗಾಲಿಡುತ್ತಿದ್ದರೆ, ಇತ್ತ ದಾಲ್ಮಿಯಾ ಸಿಮೆಂಟ್ಸ್​ನವರಿಗೆ ಸೇರಿದ ಸಂಡೂರು ತಾಲೂಕಿನ ಜೈಸಿಂಗಪುರದಲ್ಲಿ ಒಂದು ಮೈನಿಂಗ್ ಲೈಸೆನ್ಸ್ ಇತ್ತು. ದಾಲ್ಮಿಯಾ ಕಂಪೆನಿ 331.44 ಎಕರೆ ಜಾಗದಲ್ಲಿ ಮೈನಿಂಗ್ ನಡೆಸುತ್ತಿತ್ತು... ಇದರ ಮೈನಿಂಗ್ ಲೈಸೆನ್ಸ್ ನಂಬರ್ ML 2010. ದಾಲ್ಮೀಯಾ ಕಂಪನಿ 1953ರಲ್ಲಿ 30 ವರ್ಷಗಳಿಗೆ ಗುತ್ತಿಗೆ ಪಡೆದಿತ್ತು ಹಾಗೂ 1983ರಲ್ಲಿ ಮತ್ತೆ 20 ವರ್ಷಗಳಿಗೆ ನವೀಕರಣವನ್ನೂ ಮಾಡಿಸಿಕೊಂಡಿತ್ತು. ಆದ್ರೆ ಸರ್ಕಾರ 1997ರಲ್ಲಿ ದಾಲ್ಮಿಯಾ ಮಿನರಲ್ಸ್​ಗೆ ಗಣಿಗಾರಿಗೆ ನಿಲ್ಲಿಸುವಂತೆ ನೊಟೀಸ್ ಕೊಡ್ತು.. ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದ ಹಾಗೂ ನಿಬಂಧನೆಗಳನ್ನು ಪೂರೈಸದ ಹಿನ್ನೆಲೆಯಲ್ಲಿ ದಾಲ್ಮಿಯಾ ಲೈಸೆನ್ಸ್ ರದ್ದುಗೊಂಡಿತ್ತು. ಹೀಗಾಗಿ 16-06-2001ರಲ್ಲಿ ಗಣಿಗಾರಿಗೆ ನಿಲ್ಲಿಸಿದ ದಾಲ್ಮಿಯಾ ಕಂಪೆನಿ ಪರವಾನಗಿಯನ್ನು ಸರ್ಕಾರಕ್ಕೆ ಸರೆಂಡರ್ ಮಾಡ್ತು. ...

ಇದನ್ನೇ ಕಾಯ್ತಿದ್ದ ಬಲ್ಡೋಟಾ ಗ್ರೂಪ್​ ದಾಲ್ಮಿಯಾ ಮಿನರಲ್ಸ್​ನ ಗುತ್ತಿಗೆಯನ್ನು ತಾನು ಪಡೆಯೋಕೆ ಮುಂದಾಯ್ತು... ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮನವಿಯನ್ನು ಕೊಡ್ತು.. MSPLನ ಎಕ್ಸಿಕ್ಯುಟಿವ್ ಡೈರೆಕ್ಟರ್ ರಾಹುಲ್ ಬಲ್ಡೋಟಾ ರಾಜ್ಯ ಸರ್ಕಾರಕ್ಕೆ ಅರ್ಜಿ ಹಾಕಿದ್ರು. ಅವ್ರು ಬಯಸಿದ ಹಾಗೇ ಈ ಮೈನಿಂಗಿನ ಗುತ್ತಿಗೆ ಅವ್ರಿಗೆ ಸಿಕ್ಕೂಬಿಡ್ತು. ಆದ್ರೆ ಇಲ್ಲೊಂದು ಮರ್ಮ  ಇದೆ. ಆಕ್ಚುಯಲಿ, ಮಿನರಲ್ ಕನ್ಸವರ್ಷೇನ್​  ಆಕ್ಟ್ ಪ್ರಕಾರ ಒಂದು ಕಂಪನಿ ತನ್ನ ಗುತ್ತಿಗೆ ಲೈಸೆನ್ಸನ್ನ  ಸರಂಡರ್ ಮಾಡಿದ್ಮೇಲೆ, ಆ ಜಾಗಾನ ಮತ್ತೆ ನೋಟಿಫೈ ಮಾಡಿ ಮತ್ತೆ ಹರಾಜು ಹಾಕದ ಹೊರತು ಇನ್ನೊಬ್ಬರಿಗೆ ಗುತ್ತಿಗೆಗೆ ಕೊಡೋ  ಹಾಗಿಲ್ಲ. ಆದ್ರೆ ಅವತ್ತು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರ ಎಸ್​.ಎಂ. ಕೃಷ್ಣ ಅವ್ರು ದಾಲ್ಮಿಯಾ ಗಣಿ ಗುತ್ತಿಗೆಯನ್ನ ಬಲ್ಡೋಟಾ ಕಂಪೆನಿಗ ಸರಾಗವಾಗಿ ವರ್ಗ ಮಾಡಿ ಕೂತ್ಕೊಂಡ್ರು... ಮಿನರಲ್ ಕನ್ಸರ್ವಶನ್​ ಆಕ್ಟ್ 1960ರ ನಿಯಮ 59ನ್ನು ಗಾಳಿಗೆ ತೂರಿಬಿಟ್ಟ್ರು. ಮಾರ್ಚ್ 16, 2002ರಂದು ಬಲ್ಡೋಟಾಗೆ ಗಣಿ ಲೈಸೆನ್ಸ್ ಹಸ್ತಾಂತರದ ಆದೇಶ ಕೊಟ್ರು...

ಲಾಬಿಗೆ ಹೆಸರಾದ ಬಲ್ಡೋಟಾ ಕೇಂದ್ರ ಸರ್ಕಾರದ ಪರಿಸರ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳ ಕೈ ಬಿಸಿ ಮಾಡಿ, ಅಕ್ರಮವಾಗಿ ಅಪ್ರೂವಲ್​ ಕೂಡಾ ಪಡೆದ್ರು... ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ವಿಶೇಷ ಆದೇಶ ನೀಡಿದ ಕೇಂದ್ರ ಪರಿಸರ ಸಚಿವಾಲಯ, RMMPLಗೆ ಗಣಿ ಗುತ್ತಿಗೆ ನೀಡುವಂತೆ ಆದೇಶ ಹೊರಡಿಸ್ತು... ರಾಜ್ಯದ ಪ್ರಿನ್ಸಿಪಲ್ ಸೆಕ್ರೆಟರಿಗೆ ಆದೇಶದ ಪ್ರತಿ ಕಳುಹಿಸ್ತು... 2006ರ ಸೆಪ್ಟೆಂಬರ್ 13ರಂದು ಸ್ಟೇಜ್ ಒನ್​ಗೆ ಪರ್ಮಿಷನ್ ನೀಡಿದ್ರೆ, 2010 ಸೆಪ್ಟೆಂಬರ್ 9ರಂದು 2ನೇ ಹಂತದ ಅಪ್ರೂವಲ್ ನೀಡ್ತು... ವಿಚಿತ್ರ ಅಂದ್ರೆ ಇದಕ್ಕೆ ರಾಜ್ಯ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಇರಲೇ ಇಲ್ಲ... ಇನ್ನೂ ವಿಚಿತ್ರ ಅಂದ್ರೆ, 2010ನೇ ಇಸ್ವಿ ವರೆಗೂ ಬಿಜೆಪಿ ಸರ್ಕಾರ ಕೂಡ ಈ ಬಗ್ಗೆ ತುಟಿಪಿಟಿಕ್ ಎಂದಿರ್ಲಿಲ್ಲ..

ಇದಕ್ಕೆ ಎಂಎಸ್​ಪಿಎಲ್ ಕೊಡೋ ಸಮಜಾಯಿಷಿಯೇನಂದ್ರೆ, ಡಾಲ್ಮೀಯಾ ಲೈಸೆನ್ಸ್​ ಸಂಪೂರ್ಣವಾಗಿ ಸರೆಂಡರ್ ಆಗಿರಲಿಲ್ಲವಾದ್ದ್ರಿಂದ ತಾನು ಲೀಸ್ ತಗೊಂಡ ಕ್ರಮ ನ್ಯಾಯಯುತ ಅಂತ. ಖುದ್ದು ಬಲ್ದೋಟ ಅವ್ರೇ ತೆಹಲ್ಕಾ ಪತ್ರಿಕೆಗೆ ಈ ಟೆಕ್ನಿಕಲ್ ಕಾರಣ ಕೊಟ್ಟಿದಾರೆ..

ಈಗಿರೋ ಅತಿ ಮುಖ್ಯವಾದ ಪ್ರಶ್ನೆ ಏನಂದ್ರೆ, ಬಳ್ಳಾರಿ ಗಣಿಗಾರಿಕೆಯಿಂದ ಬೊಕ್ಕಸಕ್ಕೆ ಅಪಾರ ಹಾನಿಯಾಗಿದೆ; ಪರಿಸರ ಹಾಳಾಗ್ಹೋಗಿದೆ ಅಂತೆಲ್ಲಾ ಬೊಬ್ಬೆ ಹೊಡೀತಿರೋ ಹುಸಿ ಪರಿಸರವಾದಿಗಳಿಗೆ ಬಲ್ಡೋಟಾ ಅಕ್ರಮಗಳು ಯಾಕೆ ಕಣ್ಣಿಗೆ ಕಾಣ್ತಿಲ್ಲ ಅನ್ನೋದು. ಮೈನಿಂಗ್ ಎಂದರೆ ರೆಡ್ಡಿ ಬ್ರದರ್ಸ್ ಅನ್ನೋ ಅಪಖ್ಯಾತಿಯನ್ನು ಅವರ ತಲೆಗೆ ಕಟ್ಟಿ ಕೂತಿದ್ದಾರೆಯೇ ಹೊರತು, ಈ ಇಡೀ  ಪ್ರಕರಣದ ಆಳ-ಅಗಲಗಳನ್ನ ಸರಿಯಾಗಿ ಶೋಧಿಸೋ ಕೆಲಸವನ್ನ ತನಿಖಾ ಸಂಸ್ಥೆಗಳು ಯಾಕೆ  ಮಾಡ್ತಿಲ್ಲ ಅನ್ನೋದು.

ಕಳೆದ ಸೆಪ್ಟೆಂಬರ್​ನಲ್ಲಿ ಬಂಧನಕ್ಕೊಳಗಾದ ಮಾಜಿ ಸಚಿವ ಜನಾರ್ದನ ರೆಡ್ಡಿಯವರಿಗೆ ಈವರೆಗೂ ಜಾಮೀನು ಸಿಗದಂತೆ ನೋಡಿಕೊಳ್ಳುತ್ತಿರುವವರು ಯಾರು ಅನ್ನೋ ಪ್ರಶ್ನೆಗೆ ಕೂಡ, ಬಹುಶಃ ಈ ಪ್ರಶ್ನೆಗಳಲ್ಲೇ ಉತ್ತರ ಸಿಗುತ್ತೆ. ಗಣಿಗಾರಿಕೆಯಲ್ಲಿ ಪ್ರಭುತ್ವ ಸಾಧಿಸೋದಿಕ್ಕೆ ಅಂತ ಬಲ್ಡೋಟಾ ಮಾಡಿರುವಂಥಾ,  ಇನ್ನೂ ಮಾಡ್ತಾನೇ ಇರುವಂಥ ಅಕ್ರಮಗಳಿಗೆ ಕೊನೆ ಮೊದಲಿಲ್ಲ.. ಇದನ್ನ ತೆಹಲ್ಕಾ ಡಾಟ್​ ಕಾಮ್​ ಎಳೆಎಳೆಯಾಗಿ ಬಿಚ್ಚಿಟ್ಟಿದೆ.... ಬಟ್ ದೆನ್‌, ಎಲ್ಲಾ ರಾಜಕೀಯದಾಟ... ಜನಾರ್ದನ ರೆಡ್ಡಿಯವ್ರು ಹೆಚ್ಚುಕಡಿಮೆ ಒಂದೂವರೆ ವರ್ಷದಿಂದ ಜೈಲಿನಲ್ಲಿ ಕೂತಿದ್ದಾರೆ; ಬಲ್ದೋಟ ಅಂಡ್ ಕಂಪನಿ, ಪ್ರತಿಷ್ಠಿತ 'ಪ್ರೆಸಿಡೆಂಟ್ಸ್ ನ್ಯಾಷನಲ್ ಸೇಫ್ಟಿ ಅವಾರ್ಡ್' ಕೈಯಲ್ಲಿ ಹಿಡ್ಕೊಂಡು  ಬೀಗ್ತಾ ಕೂತಿದೆ.... ವಿಪರ್ಯಾಸ.
===========================
 -ಅಮೃತ ಕಿರಣ ಬಿ.ಎಂ.

ಆಕಾಶದಿ ಹಾರಾಡುವಾ....



ಆಕಾಶದಿ ಹಾರಾಡುವಾ....



    ಸ್ವಚ್ಚಂದವಾಗಿ ವಿಹರಿಸ್ತಿರೋ ಹತ್ತಾರು ಬಣ್ಣದ, ಆಕಾರದ ಹಕ್ಕಿಗಳನ್ನ ನೋಡ್ತಾ ಇದ್ರೆ ಎಂಥವರಿಗೂ ಒಂದ್ ಕ್ಷಣ, ಛೇ... ನಾನೂ ಹೀಗೆ ಹಾರಾಡೋ ಹಾಗಿದ್ರೆ ಎಷ್ಟು ಚೆನ್ನಾಗಿತ್ತು ಅಂತ ಅನ್ನಿಸ್ದೇ ಇರಲ್ಲ. ನಮ್ಮ ಪುರಾಣಪುರುಷ ಹನುಮಂತ ಆಗಸದಲ್ಲಿ ಹಾರಾಡಿದ ಕಥೆ ಕೇವಲ ಕಥೆ ಅಲ್ಲ ಅನ್ನೋದು ಖಚಿತವಾಗುತ್ತಿದೆ. ಯಾಕಂದ್ರೆ ಹಕ್ಕಿಯಂತೆ ಹಾರಾಡಲು ಮಾನವ ಇನ್ನಿಲ್ಲದಂತೆ ನಡೆಸಿದ ಯತ್ನಗಳು ಫಲ ನೀಡಿವೆ.

=============================

ಹಕ್ಕಿಗಳಂತೆ ಹಾರಾಡೋ ಕನಸನ್ನು ಕಂಡವರು ಈ ಜಗತ್ತಿನಲ್ಲಿ ಕೋಟಿಗಟ್ಟಲೆ ಜನ ಇದ್ದಾರೆ. ಇದೇ ಕನಸನ್ನ ಬೆನ್ನತ್ತಿ, ಹಕ್ಕಿ ಹಾಗೆ ಹಾರಾಡೋಕೆ ಯಾಕೆ ಸಾಧ್ಯ ಇಲ್ಲ ಅಂತಾ ಯತ್ನಿಸಿದವರಿಗೆ ಲೆಕ್ಕವೇ ಇಲ್ಲ. ನಮ್ಮಿಂದ ಎಲ್ಲಾದ್ರೂ ಉಂಟೇ ಅಂತ ಅಂದುಕೊಂಡು ಜೀವನ ಮುಗಿಸಿದವರೂ ಇದ್ದಾರೆ. 


ಹನುಮಂತ, ಮಾರುತಿ, ಆಂಜನೇಯ ಮುಂತಾದ ಹೆಸರಿನಿಂದ ಕರೆಯಲ್ಪಡುವ ಭಾರತೀಯ ಪುರಾಣಗಳ ದೈತ್ಯ ಪ್ರತಿಭೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹನುಮಂತನಿಲ್ಲದಿದ್ದರೆ ರಾಮಾಯಣ ಕೂಡಾ ಸಪ್ಪೆ ಆಗುತ್ತಿತ್ತೋ ಎನಿಸುತ್ತದೆ. ಆಂಜನೇಯನ ಪರಾಕ್ರಮಗಳಲ್ಲಿ ಸಮುದ್ರೋಲ್ಲಂಘನ ಮಹತ್ವದ್ದು. ಸೀತೆಯನ್ನು ಹುಡುಕಲು 32 ಕಿಲೋಮೀಟರ್ ಸಮುದ್ರವನ್ನು ಒಂದೇ ನೆಗೆತಕ್ಕೆ ಹಾರಿದ್ದು ಎಂಥವರನ್ನೂ ಪುಳಕಿತಗೊಳಿಸುತ್ತದೆ. ನಮ್ಮ ಪುರಾಣಪುರುಷ ಮಾರುತಿಯ ಕಥೆಯನ್ನು ಚಿಕ್ಕಂದಿನಿಂದಲೂ ನಾವು ಕೇಳಿದ್ದೇವೆ. ವಿಶೇಷ ಅಂದ್ರೆ ವಾನರ ರೂಪದಲ್ಲಿದ್ದ ಹನುಮಂತ ಕೆಲವು ಸಾಧ್ಯತೆಗಳನ್ನು ತ್ರೇತಾಯುಗದಲ್ಲೇ ಸಾಧ್ಯವಾಗಿಸಿದ್ದಾನೆ.



ಯಾವುದೇ ಸಾಧನಗಳಿಲ್ಲದೆ ಆಕಾಶದಲ್ಲಿ ಹಾರಾಡುವ ಆಂಜನೇಯನ ಸಾಮರ್ಥ್ಯ ಬಹುಚರ್ಚಿತ ವಿಷಯ. ಪುಷ್ಪಕ ವಿಮಾನ ನೋಡಿ, ಅದೇ ಮಾದರಿಯ ವಿಮಾನವನ್ನು ಈಗಾಗಲೇ ರಚಿಸಿದ್ದಾಗಿದೆ. ಆಂಜನೇಯನಂತೆ ಒಬ್ಬಂಟಿಯಾಗಿ ಹಾರಾಡುವ ಕನಸು ಮಾನವನಿಗೆ ನನಸಾಗಿಯೇ ಉಳಿದಿತ್ತು. ನೂರಾರು ಸಂಶೋಧನೆಗಳು, ಪ್ರಯತ್ನಗಳ ಕೊನೆಗೂ ಫಲ ನೀಡಲಾರಂಭಿಸಿದವು. ತನ್ನ ಯತ್ನಕ್ಕೆ ಮಾನವ ಕ್ರಮೇಣ ಫಲ ಉಣ್ಣುತ್ತಾ ಬಂದ...

ದೇಶಗಳು ಬೇರೆಯಾದರೂ ಜನರ ಉತ್ಸಾಹ, ಕನಸು ಮಾತ್ರ ಒಂದೇ ಅಲ್ವಾ.. ಹೀಗಾಗಿ ಕನಸಗಳಿಗೆ ಮಾನವ ರೆಕ್ಕೆಪುಕ್ಕ ಕಟ್ಟಿ ಹಾರಾಟಕ್ಕೆ ಬಿಟ್ಟ. ಈ ಪ್ರಯತ್ನಗಳ ಫಲವಾಗಿ ಹಲವು ರೀತಿಯ ಗ್ಪೈಡರ್ ಮಾದರಿಯ ಯಂತ್ರಗಳು ಮಾನವನನ್ನು ಹೊತ್ತೊಯ್ಯಲು ಸಿದ್ಧವಾದವು. ಆಕಾಶದಲ್ಲಿ ಹಕ್ಕಿಯಂತೆ ಹಾರಾಡುವ ಮಾನವನ ಕನಸು ಅಲ್ಪಮಟ್ಟಿಗೆ ಸಾಕಾರಗೊಂಡಿತು.

ವಿವಿಧ ದೇಶಗಳಲ್ಲಿ ಹಲವು ಉತ್ಸಾಹಿಗಳು ವಿಧವಿಧದ ಗ್ಪೈಡರ್​ಗಳನ್ನು ರೂಪಿಸಿದರು.



ಮಾನವನಿಗೆ ತೃಪ್ತಿ ಅನ್ನೋದು ಎಲ್ಲಾದ್ರೂ ಇದ್ಯಾ. ಅವನ ಉತ್ಸಾಹಕ್ಕೆ ಎಣೆಯೇ ಇಲ್ಲ. ಗ್ಪೈಡರ್ ರೀತಿಯ ಉಪಕರಣಗಳು ಹಾರಾಡಲು ಅಷ್ಟೊಂದು ಕಂಫರ್ಟಬಲ್ ಅಲ್ಲ ಅನಿಸೋಕೆ ಶುರುವಾಯ್ತು. ಯಂತ್ರವಿಲ್ಲದೇ ಥೇಟ್ ಹಕ್ಕಿಯಂತೆ ಹಾರಾಡಲೇಬೇಕು ಎಂದು ಪಣ ತೊಟ್ಟುಬಿಟ್ಟ. ಇನ್ನೂ ಏನಾದ್ರೂ ಹೊಸತು ಮಾಡಬೇಕೆಂಬ ಆಸೆ ಕಡಿಮೆ ಆಗಲಿಲ್ಲ. ಅಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆದ. ಅವಿರತ ಶ್ರಮದ ಬಳಿಕ ಸಿಕ್ಕಿದ್ದೇ ವಿಂಗ್​ ಸೂಟ್​ ಎಂಬ ಅಸ್ತ್ರ


ವಿಂಗ್ ಸೂಟ್​. ಮಾನವ ರೂಪಿಸಿರುವ ಅತ್ಯಂತ ವಿಶಿಷ್ಠ ಅಸ್ತ್ರ. ತಾನು ಹಕ್ಕಿಯಂತೆ ಹಾರಾಡಬೇಕು, ಆಕಾಶದಲ್ಲಿ ತೇಲಾಡಬೇಕು, ಹಾರಾಡ್ತಾ ಹಾರಾಡ್ತಾ ಭೂಮಿಯನ್ನು ಸುತ್ತಬೇಕು ಎನ್ನುವ ಕನಸು ನನಸಾಗುವಂತೆ ಮಾಡಿದ ವಿಶಿಷ್ಟ ಉಪಕರಣವೇ ಈ ವಿಂಗ್​ ಸೂಟ್. ಇದನ್ನು ಬರ್ಡ್​ಮನ್ ಸೂಟ್, ಸ್ಕೇರಲ್​ ಸೂಟ್​​ ಎಂದೂ ಕರೀತಾರೆ.



ಗ್ಪೈಡರ್​. ಹೆಲಿಕಾಪ್ಟರ್‌, ಚಿಕ್ಕ ವಿಮಾನಗಳ ತಂತ್ರಜ್ಞಾನವನ್ನು ಬಳಸಿಕೊಂಡು ರೂಪಿಸಿದ ಅತ್ಯಂತ ಚಿಕ್ಕ ಹಾರುವ ಉಪಕರಣ ಅಥವಾ ಒಂದು ಬಗೆಯ ದಿರಿಸು. ಒಬ್ಬ ವ್ಯಕ್ತಿ ಕಂಫರ್ಟಬಲ್​ ಆಗಿ ಆಗಸದಲ್ಲಿ ಹಾರಾಡಲು ಸಹಾಯ ಮಾಡುವ ವಿಶೇಷ ದಿರಿಸು ಈ ವಿಂಗ್ ಸೂಟ್‌. ವಿಂಗ್​ ಸೂಟ್ ಧರಿಸಿ ಹಾರಾಡೋ ವ್ಯಕ್ತಿಗಳು ಥೇಟ್ ಕಾರ್ಟೂನ್ ಹೀರೋಗಳಂತೆ ಕಾಣ್ತಾರೆ. ಯಾವುದೇ ವಿಮಾನ ಅಥವಾ ಎಂಜಿನ್​ ಅನ್ನು ತಮ್ಮ ಬೆನ್ನಿಗೆ ಅಂಟಿಸಿಕೊಳ್ಳದೇ ಆಕಾಶಕ್ಕೆ ಜಿಗೀತಾರೆ. ಪಕ್ಷಿಗಳನ್ನೂ ನಾಚಿಸುವಂತೆ ಹಾರಾಡ್ತಾರೆ. ವಿಂಗ್ ಸೂಟ್ ಧರಿಸಿ ಆಕಾಶಕ್ಕೆ ಜಿಗಿಯೋ ವ್ಯಕ್ತಿಗಳು ಥೇಟ್ ಪ್ಯಾರಾಚೂಟ್ ಥರಾನೇ ಕಾಣ್ತಾರೆ. ಅವರು ಪ್ಯಾರಾಚೂಟನ್ನು ತಮ್ಮೊಂದಿಗೆ ಕೊಂಡೊಯ್ದಿರ್ತಾರೆ.




ಪ್ಯಾರಾಚೂಟ್​ಗೂ ವಿಂಗ್ ಸೂಟ್​ಗೆ ವ್ಯತ್ಯಾಸವಿದೆ. ಪ್ಯಾರಾಚೂಟ್​ ನಿಮ್ಮನ್ನು ಸೇಫ್ ಲ್ಯಾಂಡಿಂಗ್ ಮಾಡಿಸುತ್ತೆ ಅಷ್ಟೇ. ಮೇಲಿನಿಂದ ಪ್ಯಾರಾಚೂಟ್ ಕಟ್ಟಿಕೊಂಡು ನೀವು ಜಿಗಿದಾಗ ನಿಮ್ಮನ್ನು ಸುರಕ್ಷಿತವಾಗಿ ನೆಲಕ್ಕೆ ಮುಟ್ಟಿಸುತ್ತೆ. ಆದರೆ ವಿಂಗ್​ ಸೂಟ್ ಹಾಗಲ್ಲ. ಇದರ ಉದ್ದೇಶವೇ ಬೇರೆ. ವಿಂಗ್​ ಸೂಟ್ ಮನುಷ್ಯನನ್ನು ಆಗಸದಲ್ಲಿ ಹಾರಾಡಿಸುವ ವಿಶಿಷ್ಠ ಸಾಧನ. ಸ್ಕೈಡೈವಿಂಗ್ ಮಾಡುವಾಗ ತಾನು ಧರಿಸಿದ ವಿಂಗ್ ಸೂಟ್ ಹಾಗೂ ಮಡಚಿಟ್ಟುಕೊಂಡಿರುವ ಪ್ಯಾರಾಚೂಟ್ ಬಿಟ್ರೆ ಏನೂ ಇರೋದಿಲ್ಲ.



ವಿಂಗ್ ಸೂಟ್ ರಚನೆಯೇ ಬಲು ವಿಶಿಷ್ಟ. ವಿಂಗ್ ಸೂಟ್ ಧರಿಸಿ ಹಾರಾಡುವ ವ್ಯಕ್ತಿಯು ಥೇಟ್ ಹಕ್ಕಿಗಳ ರೀತಿಯೇ ಕಾಣುತ್ತಾನೆ. ಅವುಗಳ ರೆಕ್ಕೆಗಳ ರಚನೆಯನ್ನೇ ಮಾದರಿಯಾಗಿಟ್ಟುಕೊಂಡು ವಿಂಗ್ ಸೂಟ್ ಸಿದ್ಧಪಡಿಲಾಗಿದೆ. ಕೈ, ಕಾಲು ಹಾಗೂ ದೇಹವನ್ನು ಕೂಡಿಸಿದ ರೀತಿಯಲ್ಲಿ ಈ ದಿರಿಸನ್ನು ಹೊಲಿದಿರುತ್ತಾರೆ. ಆದರೆ ನಮ್ಮ ಅಂಗಿ, ಪ್ಯಾಂಟ್ ಹೊಲಿದಂತೆ ಅಲ್ಲ. ಇದಕ್ಕೆ ವಿಶಿಷ್ಟವಾದ ಬಟ್ಟೆ ಇರುತ್ತೆ. ಈ ದಿರಿಸಿನ ಒಳಗೆ ಒಂಚೂರೂ ಗಾಳಿ ನುಸುಳದಂತೆ ಅಚ್ಚುಕಟ್ಟಾಗಿ ಸಿದ್ಧಪಡಿಸಿರುತ್ತಾರೆ.



ವಿಂಗ್​ ಸೂಟ್ ರಚನೆಯೇ ವಿಶಿಷ್ಠ. ವಿಂಗ್​ ಸೂಟ್ ಧರಿಸಿ ಹಾರುವಾಗ ಇದು ಗಾಳಿಯನ್ನು ಮೇಲ್ಮುಖವಾಗಿ ಪ್ರಬಲವಾಗಿ ಒಳನುಗ್ಗಿಸುವಂತಹ ಕೆಲಸ ಮಾಡುತ್ತದೆ. ಹೊರಗಿನ ಗಾಳಿ ಒಳಗಡೆ ನುಸುಳದಂತೆ ಮಾಡುವ ವ್ಯವಸ್ಥೆಯೂ ಇದೆ. ಜೊತೆಗೆ ಒಳಗಿನ ಗಾಳಿಯನ್ನು ರಭಸವಾಗಿ ಹಾಗೂ ಮೇಲ್ಮುಖವಾಗಿ ತಿರುಗಿಸಿ ನುಗ್ಗಿಸುವಂತಹ ತಂತ್ರಜ್ಞಾನ ರೂಪಿಸಲಾಗಿರುತ್ತದೆ. ವಿಂಗ್ ಸೂಟ್ ಧರಿಸಿದ ವ್ಯಕ್ತಿಯ ಕೈ ಹಾಗೂ ಕಾಲುಗಳು ಮತ್ತು ದೇಹದ ಮಧ್ಯೆ ರಭಸವಾಗಿ ಗಾಳಿಯನ್ನು ನುಗ್ಗಿಸಲಾಗುತ್ತದೆ. ಒಂದು ವಿಮಾನ ಹಾರಲು ಅದಕ್ಕೆ ಬೇಕಾಗುವಷ್ಟು ಸಾಮರ್ಥ್ಯದ ಎಂಜಿನ್ ಅಳವಡಿಸಿರುತ್ತಾರೆ. ಹಾಗೆಯೇ ಒಬ್ಬ ವ್ಯಕ್ತಿ ವಿಂಗ್​ಸೂಟ್ ಧರಿಸಿ ಹಾರುವಾಗ ಪ್ರಬಲವಾಗಿ ಗಾಳಿಯನ್ನು ನುಗ್ಗಿಸುವ ಸಾಮರ್ಥ್ಯವನ್ನು ವಿಂಗ್​ಸೂಟ್ ಹೊಂದಿರುತ್ತದೆ. ವಿಮಾನದ ಎಂಜಿನ್​ ವಿಮಾನವನ್ನು ಮೇಲಕ್ಕೆತ್ತುವಷ್ಟು ಸಮರ್ಥವಾಗಿರುತ್ತೆ. ಅದೇ ರೀತಿ ಒಬ್ಬ ಮನುಷ್ಯನನ್ನು ಆಗಸದಲ್ಲಿ ತೇಲಿಸುವಷ್ಟು ಶಕ್ತಿಶಾಲಿಯಾದ ತಂತ್ರಜ್ಞಾನ ಅಳವಡಿಸಿರುತ್ತಾರೆ. ಗಾಳಿಯ ಈ ಒತ್ತಡವು ವಿಂಗ್​ ಸೂಟ್ ಧರಿಸಿದ ವ್ಯಕ್ತಿಯನ್ನು ಕ್ರಮೇಣ ಮೇಲ್ಮುಖವಾಗಿ ಒಯ್ಯುತ್ತದೆ. ಬೇಕಾದ್ರೆ ವೇಗವನ್ನು ಹೆಚ್ಚಿಸಿಕೊಳ್ಳುವಂತೆ, ಕಡಿಮೆ ಮಾಡುವಂತೆ ಕಂಟ್ರೋಲಿಂಗ್ ಸಿಸ್ಟಮ್ ಕೂಡಾ ಅಳವಡಿಸಲಾಗಿರುತ್ತೆ. ಹಾರಾಡುವಾಗ ದೇಹದ ಶೇಪ್​ ಸ್ವಲ್ಪ ಚೇಂಜ್ ಮಾಡೋದ್ರಿಂದ ಎತ್ತರಕ್ಕೆ ಥ್ರಿಲ್ಲಿಂಗ್ ಅನುಭವ ಪಡೆಯಬಹುದು. ಈ ಎಲ್ಲಾ ತಂತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ರೆ, ಹಕ್ಕಿಯನ್ನೂ ನಾಚಿಸುವಂತೆ ಮಾನವ ಆಕಾಶದಲ್ಲಿ ಹಾರಾಡಬಹುದು. ಅಂದಂತೂ ಒಂದು ರೋಚಕ ಅನುಭವ.

ವಿಂಗ್​ಸೂಟ್​ ಆಗಸದಲ್ಲಿ ಹಾರಾಡುವಂತೆ ಅನುವುಮಾಡಿಕೊಡುವ ವಿಶೇಷ ಉಪಕರಣ ಅಷ್ಟೇ. ಆದ್ರೆ ಆಕಾಶಕ್ಕೆ ಜಿಗಿಯೋದಾದ್ರೂ ಹೇಗೆ ಅಲ್ವಾ...? ಈ ಪ್ರಶ್ನೆ ನಿಮ್ಮನ್ನು ಕಾಡೇ ಇರುತ್ತೆ. ಹೌದು, ಇದಕ್ಕೆ ಹಲವು ವಿಧಾನಗಳಿವೆ. ವಿಮಾನದಲ್ಲಿ ಹತ್ತಿ, ಅದು ಆಗಸದಲ್ಲಿ ಹಾರಾಡುತ್ತಿರಬೇಕಾದಾಗ ವಿಂಗ್​ಸೂಟ್ ಧರಿಸಿ ವಿಮಾನದಿಂದ ಜಂಪ್ ಮಾಡಬಹುದು. ಆಗಸದಲ್ಲಿ ಹಾರಾಡಿ, ತೇಲಾಡಿ ಕೊನೆಗೆ ಭೂಮಿಗೆ ಇಳಿಯುವಾಗ ಪ್ಯಾರಾಚೂಟ್ ಬಿಚ್ಚಿದರೆ ಸೇಫ್ ಲ್ಯಾಂಡಿಂಗ್‌. ಇದು ಒಂದು ವಿಧಾನ. ಅದೇ ರೀತಿ ಹಾರಾಡುವ ಹೆಲಿಕಾಪ್ಟರ್​ನಿಂದಲೂ ವಿಂಗ್​ಸೂಟ್​ ಧರಿಸಿ ಆಗಸಕ್ಕೆ ಜಿಗಿಯಬಹುದು. ಇದರ ಜೊತೆಗೆ ಅತ್ಯಂತ ಎತ್ತರದ ಕಟ್ಟಡದ ತುತ್ತತುದಿಯಲ್ಲಿರುವ ಪಾಯಿಂಟ್​ನಿಂದ ಆಗಸಕ್ಕೆ ಜಿಗಿಯಬಹುದು. ಜೊತೆಗೆ ಎತ್ತರವಾದ ಬಂಡೆಗಳನ್ನೂ ಜಿಗಿಯಲು ಬಳಸಿಕೊಳ್ಳಬಹುದು.



ವಿಮಾನ, ಹೆಲಿಕಾಪ್ಟರ್​, ಎತ್ತರದ ಕಟ್ಟಡ ಅಥವಾ ಬೃಹತ್ ಎತ್ತರದ ಬಂಡೆಗಳ ಮೇಲಿಂದ ವಿಂಗ್​ಸೂಟ್​ ಧರಿಸಿ ಒಮ್ಮೆ ಆಗಸಕ್ಕೆ ಜಿಗದರೆ ಮುಗೀತು. ನೀವು ಅಕ್ಷರಶಃ ಹಕ್ಕಿಯೇ ಸರಿ. ಬೇಕಾದಷ್ಟು ಸುತ್ತಾಡಿ, ಸುಸ್ತಾದಾಗ ನೀವು ಹೊತ್ತೊಯ್ದಿರುವ ಪ್ಯಾರಾಚೂಟ್ ಬಿಚ್ಚಿದರೆ ಸಾಕು, ನೀವು ಸುರಕ್ಷಿತವಾಗಿ ಭೂಮಿಗೆ ಮರಳುತ್ತೀರಾ. ಇದೊಂದು ಪಕ್ಕಾ ಟೆಕ್ನಿಕಲ್ ವರ್ಕ್‌. ಒಂಚೂರು ಲೆಕ್ಕ ತಪ್ಪದಿದ್ದರೆ ನೀವು ಸೇಫ್​.


===============================



ವಿಂಗ್ ಸೂಟ್ ಪ್ರಸಿದ್ಧಿಗೆ ಬಂದಿದ್ದು 90ರ ದಶಕದ ಕೊನೆಯಲ್ಲಿ. ಸುಸಜ್ಜಿತ ವಿಂಗ್ ಸೂಟ್ ಮಾದರಿಯ ಉಡುಪನ್ನು ಸಿದ್ಧಪಡಿಸಿದ್ದು ಫಿನ್ಲೆಂಡ್​ನ 'ಜಾರಿ ಕೌಸ್ಮಾ' ಮತ್ತು ಕ್ರೋವೇಷಿಯಾದ 'ರಾಬರ್ಟ್ ಪೆಕ್ನಿಕ್' ಎಂಬ ಉತ್ಸಾಹಿಗಳು. ಈ ಇಬ್ಬರಲ್ಲೂ ವಿಂಗ್​ ಸೂಟ್​ ಧರಿಸಿ ಹಾರಾಡೋ ಬಗ್ಗೆ ಅದೆಂತಹ ಆಸಕ್ತಿ ಇತ್ತೆಂದರೆ, ಇಬ್ಬರೂ ಸೇರಿ ಬರ್ಡ್​ಮನ್ ಎಂಬ ಸಂಸ್ಥೆಯನ್ನೇ ಶುರು ಮಾಡಿಬಿಟ್ರು. ಇದು ವಿಂಗ್​ ಸೂಟ್​ ಇತಿಹಾಸದ ಮಹತ್ವದ ಹೆಜ್ಜೆ. ಈ ಮೊದಲು ಕೆಲವ ಉತ್ಸಾಹಿಗಳು ಆಕಾಶದಲ್ಲಿ ಹಾರಾಡಲು ಯತ್ನಿಸಿ ವಿಫಲರಾಗಿದ್ದರು. ಮೊಟ್ಟಮೊದಲ ವಿಶ್ವಾಸಾರ್ಹ ವಿಂಗ್ ಸೂಟ್ ದಿರಿಸು ಸಿದ್ಧಪಡಿಸಿದ್ದು ಬರ್ಡ್​ಮನ್ ಸಂಸ್ಥೆಯ ಖ್ಯಾತಿ. ಇಲ್ಲಿಂದ ಸ್ಕೈ ಡೈವಿಂಗ್​ನ ಹೊಸ ಅಧ್ಯಾಯವೇ ಆರಂಭವಾಯ್ತು.



ವಿಂಗ್​ ಸೂಟ್​ಗಳನ್ನು ಸಿದ್ಧಪಡಿಸುವುದು ಹಾಗೂ ಅವುಗಳನ್ನು ಮಾರಾಟ ಮಾಡುವುದು ಮತ್ತು ಉತ್ಸಾಹಿಗಳಿಗೆ ವಿಂಗ್​ಸೂಟ್​ ಹಾರಾಟಕ್ಕೆ ಟ್ರೈನಿಂಗ್ ಕೊಡುವುದು ಬರ್ಡ್​ಮನ್ ಸಂಸ್ಥೆಯ ಉದ್ದೇಶ. ಮಕ್ಕಳು, ಯುವಕರು, ಮಹಿಳೆಯರು ಹೀಗೆ ನಾನಾ ಜಾಯಮಾನದ ವ್ಯಕ್ತಿಗಳಿಗೆ ಸೂಕ್ತವಾಗುವ ವಿಂಗ್​ಸೂಟ್​ಗಳನ್ನು ಸಿದ್ಧಪಡಿಸಿದ್ರು. ಆಸಕ್ತರಿಗೆ ಸೂಕ್ತ ತರಬೇತಿಯನ್ನೂ ನೀಡೋಕೆ ಶುರು ಮಾಡಿದ್ರು. ಬರ್ಡ್​ಮನ್​ ಕಂಪನಿ ವಿಂಗ್​ಸೂಟ್​ ಸಾಧನಗಳ ಹೊಸ ಹೊಸ ಆವಿಷ್ಕಾರಗಳನ್ನು ನಿರಂತರ ಮಾಡುತ್ತೆ. ಹಾಗೆಯೇ ಅವುಗಳನ್ನು ಪ್ರಯೋಗ ಮಾಡಿ ಮಾರುಕಟ್ಟೆಗೆ ಬಿಡುಗಡೆಮಾಡುತ್ತೆ. ಬರ್ಡ್​ಮನ್​ ಕಂಪನಿ ತಯಾರಿಸೋ ವಿಂಗ್​ಸೂಟ್​ ಬೆಲೆ 400 ರಿಂದ 1200 ಯೂರೋ. ಅಂದರೆ ಸರಿಸುಮಾರು 70 ಸಾವಿರ ರೂಪಾಯಿ.


ಪ್ಯಾರಾಚೂಟ್​ನಿಂದ ಜಿಗಿಯೋದು ಕಾಮನ್‌. ಇದಕ್ಕೆ ಸೂಕ್ತ ತರಬೇತಿ ಬೇಕು. ವಿಂಗ್​ಸೂಟ್​ ಹಾರಾಟಕ್ಕೂ ಪ್ಯಾರಾಚೂಟ್ ಲರ್ನಿ​ಂಗ್ ತುಂಬಾನೆ ಇಂಪಾರ್ಟೆಂಟ್‌. ಪ್ಯಾರಾಚೂಟ್​ನಿಂದ ಜಿಗಿಯಲು ಕಲಿತವರಿಗೆ ಮಾತ್ರ ವಿಂಗ್​ಸೂಟ್​ ಹಾರಾಟ ಸುಲಭಸಾಧ್ಯ. ಏಕೆಂದ್ರೆ ವಿಂಗ್​ಸೂಟ್​ ಧರಿಸಿ ಹಾರಾಡಬೇಕಂದ್ರೆ, ಪ್ಯಾರಾಚೂಟ್‌, ವಿಮಾನ ಅಥವಾ ಎತ್ತರದ ಪ್ರದೇಶದಿಂದ ಜಿಗಿಯಬೇಕು. ಹೀಗೆ ಜಿಗಿಯೋದಕ್ಕೂ ವಿಶೇಷ ತರಬೇತಿ ಅತ್ಯಗತ್ಯ. ಬರ್ಡ್​ಮನ್ ತರಹದ ಕಂಪನಿಗಳು ಇದಕ್ಕೆ ಟ್ರೈನರ್​ಗಳನ್ನು ಒದಗಿಸಿ, ಸೂಕ್ತ ತರಬೇತಿ ನೀಡ್ತವೆ. ಅದಕ್ಕೆಂದೇ ಪ್ರತ್ಯೇಕ ಕ್ಲಾಸಸ್​ ಕೂಡಾ ನಡೆಯುತ್ವೆ. ವಿಂಗ್​ಸೂಟ್​ ಧರಿಸಿ ಹಾರಾಡಬೇಕಂದ್ರೆ ಏನಿಲ್ಲವೆಂದ್ರೂ ಕನಿಷ್ಠ 200 ಬಾರಿಯಾದರೂ ಪ್ಯಾರಾಚೂಟ್​ನಿಂದ ಜಿಗಿದಿರುವ ಅನುಭವ ಇರಬೇಕು. ಅದೂ 18 ತಿಂಗಳ ಒಳಗಡೆ ಈ ಸಾಧನೆ ಮಾಡಿರಬೇಕು. ಅದೂ ಟ್ರೈನರ್ ಜೊತೆಗೂಡಿ. ಇಲ್ಲದಿದ್ದರೆ ಒಬ್ಬಂಟಿಯಾಗಿ ವಿಂಗ್​ಸೂಟ್​ ಧರಿಸಿ ಹಾರಾಡೋದು ಅಷ್ಟೊಂದು ಸೇಫ್ ಅಲ್ಲ ಎಂಬುದು ತಜ್ಞರ ಅಭಿಮತ.



ಬರ್ಡ್​ಮನ್ ಕಂಪನಿ ಸಿದ್ಧಪಡಿಸಿದ ವಿಂಗ್​ಸೂಟ್ ತಯಾರು ಮಾಡುವ ಮೊದಲು ಸ್ಕೈಡೈವಿಂಗ್​ಗೆ ಬಳಸಿದ ಉಪಕರಣಗಳು ತುಂಬಾ ವಿಶಿಷ್ಟವಾಗಿದ್ದವು. ಇದನ್ನ ಕೇಳಿದ್ರೆ ನಿಮಗೆ ನಗು ಬರಬಹುದು. ಆದ್ರೆ ಇದು ನಿಜ. ಕ್ಯಾನ್ವಾಸ್‌, ಕಟ್ಟಿಗೆ, ರೇಷ್ಮೆ, ಸ್ಟೀಲ್‌, ಹಾಗೂ ತಿಮಿಂಗಿಲದ ಮೂಳೆಯನ್ನು ಬಳಸಿ ವಿಂಗ್​ ಸೂಟ್​ ತಯಾರಿಸಲಾಗುತ್ತಿತ್ತು. ಆದರೆ ಇವಾವುವೂ ಅಷ್ಟೊಂದು ವಿಶ್ವಾಸಾರ್ಹ ಆಗಿರಲಿಲ್ಲ. ಇದು ವಿಂಗ್​ ಸೂಟ್​ನ ಆರಂಭಿಕ ಹಂತ. ವಿಂಗ್ ಸೂಟ್​ ಕಲ್ಪನೆ ಅಂದು ತೀರಾ ಬಾಲಿಶ ಎಂದು ಪರಿಗಣಿತವಾಯ್ತು. ದಿನೇದಿನೇ ನಡೆದ ಹೊಸ ಪ್ರಯೋಗಗಳು ವಿಂಗ್ ಸೂಟ್​ಗೆ ಒಂದು ಸ್ಪಷ್ಟ ರೂಪ ನೀಡಿದವು. ನಾವಿಂದು ಬಳಸುತ್ತಿರುವ ವಿಂಗ್​ಸೂಟ್ ಅತ್ಯಂತ ಸುಧಾರಿತ ಸಾಧನ.



ವಿಂಗ್ ಸೂಟ್​ ಧರಿಸಿದ ಮನುಷ್ಯ ಎಷ್ಟು ಹೊತ್ತು ಆಗಸದಲ್ಲಿ ತೇಲಬಹುದು ಅನ್ನೋ ಕುತೂಹಲ ಸಹಜ. ಹನುಮಂತ ವಿಂಗ್​ ಸೂಟ್ ಇಲ್ಲದೆಯೇ 32 ಕಿಮೀ ದೂರ ಆಗಸದಲ್ಲಿ ಕ್ರಮಿಸಿದ್ದ. ಆದರೆ ಮಾನವನಿಂದ ಇದು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆಗಸದಲ್ಲಿ ಮಾನವನ ಈವರೆಗಿನ ಹಾರಾಟದ ದಾಖಲೆ ಅಂದ್ರೆ, 20.5 ಕಿಲೋಮೀಟರ್​!. ಅಚ್ಚರಿ ಎನಿಸಿದ್ರೂ ಇದು ನಿಜ. ಗಿಬ್ರಾಲ್ಟರ್ ಜಲಸಂಧಿಯ ಒಂದು ತುದಿಯಿಂದ ಮತ್ತೊಂದು ತುದಿಗೆ ವಿಂಗ್​ ಸೂಟ್ ದಿರಿಸು ಧರಿಸಿ ನಡೆಸಿದ ಹಾರಾಟ ಯಶಸ್ವಿಯಾಗಿದೆ. ಸ್ಪೇನ್ ದೇಶದ ಅಲ್ವಾರೋ ಬುಲ್ಟೋ, ಸ್ಯಾಂಟಿ ಕೊರೆಲ್ಲಾ ಮತ್ತು ಟೋನಿ ಲೊಪೆಜ್ ಎಂಬ ಉತ್ಸಾಹಿಗಳು 2005ರಲ್ಲಿ ಈ ಸಾಧನೆಗೈದರು. ಇವರು ಜಿಗಿದದ್ದು 32 ಸಾವಿರ ಅಡಿ ಎತ್ತರದಿಂದ. ಇಷ್ಟು ದೂರು ಹಾರಲು ಸಾಕಷ್ಟು ಎನರ್ಜಿ ಬೇಕೇ ಬೇಕು. ಅಷ್ಟೇ ಅಲ್ಲ, ಹಾರಾಟದಲ್ಲಿ ಸಾಕಷ್ಟು ಅನುಭವವೂ ಅತ್ಯಗತ್ಯ. ನೀರಿನ ಮೇಲೆ ವಿಂಗ್​ಸೂಟ್ ಲ್ಯಾಂಡಿಂಗ್​ ಸೇಫ್ ಅಲ್ಲ ಎಂಬುದು ತಜ್ಞರ ಅಭಿಮತ.



ವಿಂಗ್​ಸೂಟ್ ಧರಿಸಿ ಆಕಾಶಕ್ಕೆ ನೆಗೆದಾಗ ಸ್ಕೈ ಡೈವರ್​ನ ಹೊಟ್ಟೆ ಭೂಮಿಗೆ ಅಭಿಮುಖವಾಗಿರಬೇಕು ಎಂಬುದು ಇದರ ಸಾಮಾನ್ಯ ನಿಯಮ. ಒಂದು ಬಾರಿ ಭೂಮಿಯೆಡೆಗೆ ನೆಗೆದಾಗ ಗಂಟೆಗೆ ಸುಮಾರು 200 ಕಿಲೋಮೀಟರ್​ ವೇಗವನ್ನು ಅವನು ಗಳಿಸಿರುತ್ತಾನೆ. ಇಷ್ಟೊಂದು ವೇಗವನ್ನು ನಿಯಂತ್ರಿಸುವುದು ಅವನ ಮುಂದಿರುವ ಅತ್ಯಂತ ದೊಡ್ಡ ಸವಾಲು. ವಿಂಗ ಸೂಟ್ ಎಂದ ದಿರಿಸು ಗರಿಷ್ಠ ವೇಗವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿರುತ್ತದೆ. ಕನಿಷ್ಟ 45 ಕಿಲೋಮೀಟರ್​ಗೆ ವೇಗವನ್ನು ತಗ್ಗಿಸಲು ಸಾಧ್ಯ.



ಸರಿ ಸ್ಕೈ ಡೈವಿಂಗ್​ನಲ್ಲಿ ಈಗ ಪರಿಣಿತಿ ಪಡೆದಿದ್ದಾಯ್ತು. ಮಾನವನ ಕನಸೂ ಈಡೇರಿತು. ಇಷ್ಟೇ ಆದ್ರೆ ಥ್ರಿಲ್ ಎಲ್ಲಿರುತ್ತೆ. ಏನಾದ್ರೂ ಹೋಸಾದನ್ನು ಮಾಡಬೇಕಲ್ವಾ.​ ಸ್ಕೈ ಡೈವಿಂಗ್​ ಚರಿತ್ರೆಯಲ್ಲಿ ಪೋಲೆಂಡ್ ಉತ್ಸಾಹಿಗಳು ಒಂದು ಸಾಹಸವನ್ನೇ ಮೆರೆದಿದ್ದಾರೆ. ಒಟ್ಟು 104 ಸ್ಕೈ ಡೈವರ್ಸ್​ ಒಟ್ಟುಗೂಡಿ ಒಂದೇ ಬಾರಿ ಆಗಸಕ್ಕೆ ನೆಗೆದು ಕೈಕೈ ಹಿಡಿದು ಹಾರಾಡಿದ್ರು. ಇದಂತೂ ಅವಿಸ್ಮರಣೀಯ ಅನುಭವ ಅಂತಾರೆ ಈ ತಂಡದ ಕ್ಯಾಪ್ಟನ್​. ವಿಶೇಷ ಅಂದ್ರೆ ಈವರೆಗೆ ಇದ್ದ 99 ಜನರ ದಾಖಲೆ ಮುರಿದದ್ದು. ಈ ದಾಖಲೆ ಮುರಿಯಲು ಈ ತಂಡ ಪಡಿಪಾಟಲು ಅಷ್ಟಿಷ್ಟಲ್ಲ. ಬರೋಬ್ಬರಿ 14 ಬಾರಿ ಯತ್ನಿಸಿ ವಿಫಲವಾಗಿದ್ದ ಈ ತಂಡ 15ನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದೆ. ಎಲ್ಲರೂ ಒಟ್ಟಾಗಿ ಆಗಸದಿಂದ ಭೂಮಿಯನ್ನು ಸುತ್ತುಹಾಕೋದು ಮರೆಯಲಾರದ ಕ್ಷಣ.



ಜಾರಿ ಕೌಸ್ಮಾ ಸ್ಕೈ ಡೈವಿಂಗ್​ನಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ಸುಮಾರು 2 ಸಾವಿರ ಬಾರಿ ಅವರು ವಿಂಗ್ ಸೂಟ್ ಹೆಗಲಿಗೇರಿಸಿಕೊಂಡು ಆಗಸಕ್ಕೆ ನೆಗೆದಿದ್ದಾರೆ. ಒಟ್ಟು 3 ಸಾವಿರ ಬಾರಿ ಪ್ಯಾರಾಚೂಟ್​ನಿಂದ ಜಿಗಿದಿದ್ದಾರೆ. ಇಷ್ಟೊಂದು ಅನುಭವ ಪಡೆದಿರುವ ಕೌಸ್ಮಾ ಯುವ ಸ್ಕೈ ಡೈವರ್ಸ್​ಗೆ ಸ್ಫೂರ್ತಿದಾಯಕ. ಸ್ಕೈ ಡೈವಿಂಗ್ ತರಬೇತಿಯಲ್ಲಿ ಆತ ಸಿದ್ಧಹಸ್ತ. ಎಲ್ಲಾ ದೇಶಗಳಲ್ಲೂ ಉತ್ತಮ ತರಬೇತಿ ನೀಡುವ ನೂರಾರು ಕ್ಲಬ್​ಗಳಿವೆ, ಸಂಸ್ಥೆಗಳಿವೆ. ಪ್ರತಿನಿತ್ಯ ನೂರಾರು ತರುಣರು ತರಬೇತಿ ಪಡೆದು ಆಗಸಕ್ಕೆ ಜಿಗಿಯುತ್ತಿದ್ದಾರೆ.


ಆಗಸದಲ್ಲಿ ಹಾರಾಡುವಾಗ ಇಷ್ಟೊಂದು ಖುಷಿ ನೀಡುವ ವಿಂಗ್​ಸೂಟ್ ಹಲವರ ಪ್ರಾಣವನ್ನೂ ಕಳೆದಿದೆ. ಅಮೆರಿಕಾ, ಇಟಲಿ, ಚೀನಾ, ನ್ಯೂಜಿಲೆಂಡ್​ ಮೊದಲಾದೆಡೆ 12 ಮಂದಿ ಅಸುನೀಗಿದ್ದಾರೆ ಎಂಬ ಮಾಹಿತಿ ಇದೆ. ಆಗಸದಲ್ಲಿ ತೇಲಾಡುವ ಮನುಷ್ಯನ ಉತ್ಸಾಹ ಜೀವವನ್ನೂ ತೆಗೆದಿದೆ. ಸ್ಕೈ ಡೈವಿಂಗ್ ನಾವಂದುಕೊಂಡಷ್ಟು ಸುಲಭ ಅಲ್ಲ. ನಾವಂದುಕೊಂಡದ್ದನ್ನು ಸಾಧ್ಯವಾಗಿಸಲು ಒಂದು ತಪಸ್ಸಿನಂತೆ ಆಚರಿಸಬೇಕು. ಆಗಸಕ್ಕೆ ಜಿಗಿದಾಗ ಕೈಗಳನ್ನು ರೆಕ್ಕೆ ರೀತಿ ನಿಯಮಿತವಾಗಿ ಹಿಡಿದಿರಬೇಕಾಗುತ್ತೆ. ಇಲ್ಲಿ ಕೈಗಳ ಸ್ನಾಯುಗಳು ತೀವ್ರ ಒತ್ತಡಕ್ಕೆ ಒಳಗಾಗಿ ಪ್ರಾಣಾಪಾಯದ ಭೀತಿ ಎದುರಾಗುತ್ತೆ. ಆಗಲೇ ಅವಘಡ ಸಂಭವಿಸೋದು. ಸಾಕಷ್ಟು ಪೂರ್ವ ತಯಾರಿ ಇಲ್ಲದೆ ಆಗಸಕ್ಕೆ ಜಿಗಿಯೋದು ಸೂಕ್ತವಲ್ಲ.



ಇದು ಜಗತ್ತಿನ ಕಥೆಯಾಯ್ತು. ನಮ್ಮ ದೇಶದಲ್ಲಿ ಸ್ಕೈ ಡೈವಿಂಗ್ ಏನಾದ್ರೂ ಅವಕಾಶ ಇದೆಯಾ ಎಂಬ ಕುತೂಹಲ ಇದೆ ಅಲ್ವಾ... ಭಾರತವೇನೂ ಕಡಿಮೆಯಿಲ್ಲ. ಭಾರತದಲ್ಲಿ ಇಂಡಿಯನ್ ಪ್ಯಾರಾಚೂಟ್ ಫೆಡರೇಷನ್ ಎಂಬ ಅತ್ಯುತ್ತಮ ಸಂಸ್ಥೆಯನ್ನು ಕಟ್ಟಿ, ಸ್ಕೈ ಡೈವಿಂಗ್​ಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸ್ಕೈಡೈವಿಂಗ್‌, ಪ್ಯಾರಾಸೈಲಿಂಗ್‌, ಪ್ಯಾರಾ ಗ್ಲೈಡಿಂಗ್​ ಮೊದಲಾದ ಸಾಹಸ ಕ್ರೀಡೆಗಳನ್ನು ಉತ್ಸಾಹಿಗಳು ಆಯ್ದುಕೊಳ್ಳುತ್ತಿದ್ದಾರೆ. ಫೆಡರೇಷನ್ ಅಷ್ಟೇ ಅಲ್ಲದೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲೂ ಸ್ಕೈಡೈವಿಂಗ್​ಗೆ ಉತ್ತೇಜನ ನೀಡಲಾಗುತ್ತಿದೆ. ಆದರೆ ವಿದೇಶಗಳಷ್ಟು ಫೇಮಸ್ ಆಗಿಲ್ಲ. ಸ್ಕೈಡೈವಿಂಗ್​ಗೆ ತಗುಲುವ ಖರ್ಚು ಉತ್ಸಾಹಿಗಳು ಹಿಂದೇಟು ಹಾಕುವಂತೆ ಮಾಡುತ್ತೆ. ವಿಂಗ್​ ಸೂಟ್​ ದಿರಿಸು ಖರೀದಿಸಲು ಹಾಗೂ ತರಬೇತಿಗೆ ಸಾಕಷ್ಟು ಹಣ ಬೇಕು. ವಿಂಗ್​ ಸೂಟ್​ ಧರಿಸಿ ಆಗಸಕ್ಕೆ ಜಿಗಿಯಲು ಹೆಲಿಕಾಪ್ಟರ್‌, ವಿಮಾನಗಳು ಬೇಕು. ಅಥವಾ ಬಿಸಿಗಾಳಿ ಬಲೂನು ಬೇಕು. ಸಾಮಾನ್ಯ ಭಾರತೀಯರಿಗೆ ಇದು ನಿಲುಕದ್ದು. ಹಣವಂತರು ಮಾತ್ರ ಈ ಸಾಹಸಕ್ಕೆ ಕೈಹಾಕಲು ಸಾಧ್ಯ.



ಸ್ಕೈ ಡೈವಿಂಗ್ ದಿನೇ ದಿನೇ ಹೊಸ ಹೊಸ ತಂತ್ರಜ್ಞಾನಗಳಿಗೆ ಮೈಯೊಡ್ಡುತ್ತಿದೆ. ಸುರಕ್ಷಿತ ಸ್ಕೈ ಡೈವಿಂಗ್​ಗೆ ಕಂಪ್ಯೂಟರ್​ ಬಳಕೆ ಹೊಸ ಸಾಧ್ಯತೆ. ಸ್ಕೈ ಡೈವಿಂಗ್​ ಹಾರಾಟಕ್ಕೆ ಸೂಕ್ತ ಮಾಹಿತಿ ಕಲೆಹಾಕಿ, ಅದನ್ನು ಕಂಪ್ಯೂಟರ್​ ಸಹಾಯದಿಂದ ವಿಶ್ಲೇಷಿಸಲಾಗುತ್ತದೆ. ಅಂದರೆ ಯಾವ ಌ​ಂಗಲ್​ನಲ್ಲಿ ಸ್ಕೈ ಡೈವರ್​ ಸಾಗಬೇಕು, ಎಷ್ಟು ಸ್ಪೀಡ್ ಗಳಿಸಬೇಕು ಅಥವಾ ಕಡಿತಗೊಳಿಸಬೇಕು, ಎಲ್ಲೆಲ್ಲಿ ತಿರುವುಗಳನ್ನು ಪಡೆದು ಸಾಗಬೇಕೆಂಬ ಎಂಬಂತಹ ಕರಾರುವಕ್​ ಮಾಹಿತಿ ಬೇಕು. ಎಲ್ಲಾ ಡೇಟಾಗಳನ್ನು ಸಂಗ್ರಹಿಸಿ ಹಾರಾಡುವಾಗ ಅಳವಡಿಸಿಕೊಳ್ಳಲಾಗುತ್ತೆ. ಇತ್ತೀಚೆಗಂತೂ ಜಿಪಿಎಸ್​ ತಂತ್ರಜ್ಞಾನ ಹೆಚ್ಚು ವಿಶ್ವಾಸಾರ್ಹ ಎನಿಸಿದೆ. ಹಾರಾಟದಲ್ಲಿ ಜಿಪಿಎಸ್ ತಂತ್ರಜ್ಞಾನದಿಂದಾಗಿ ಹಾರಾಟದ ಪ್ರಮುಖ ಅಂಶಗಳನ್ನೂ ಪ್ರತೀ ಕ್ಷಣವೂ ಒದಗಿಸಲಾಗುತ್ತದೆ.



ವಿಂಗ್ ಸೂಟ್​ ಮುಂದಿನ ಆವೃತ್ತಿ ಜಟ್​ ಪವರ ವಿಂಗ್​ ಸೂಟ್‌. ಹೌದು ವಿಮಾನಗಳಿಗೆ ಎಂಜಿನ್​ ಜೋಡಿಸಿದಂತೆ ಮನುಷ್ಯನಿಗೆ ಜೋಡಿಸಿದರೆ ಹೇಗಿರುತ್ತೆ. ಇಂಥಾ ಕಲ್ಪನೆಯನ್ನು ಸಾಧ್ಯವಾಗಿಸಿ ಪ್ರಯೋಗಿಸಿ, ಯಶಸ್ವಿಯೂ ಆಗಿದ್ದಾಗಿದೆ. ಆದರೆ ಇದು ಅತ್ಯಂತ ದುಬಾರಿ ಸಾಹಸ ಹಾಗೂ ಇನ್ನಷ್ಟು ತಾಂತ್ರಿಕ ನೈಪುಣ್ಯತೆ ಬೇಕು.ವೆಸ್ ರೋಸಿ ಎಂಬಾತ ಜೆಟ್ ಎಂಜಿನ್ ಧರಿಸಿಕೊಂಡು ಸುಮಾರು 8 ನಿಮಿಷಗಳ ಕಾಲ ಸ್ವಿಸ್ ಅಲ್ಫ್ಸ್​ ಶ್ರೇಣಿಯಲ್ಲಿ ನಡೆಸಿದ ಹಾರಾಟ ಐತಿಹಾಸಿಕ ಸಾಹಸ ಎಂದೇ ಬಿಂಬಿತವಾಯ್ತು. ಜೆಟ್ ಎಂಜಿನ್​ ಸಹಾಯದಿಂದ 160 ಕಿಲೋಮೀಟರ್ ವೇಗದ ಸಮತಲ ಹಾರಾಟವನ್ನು ಸಾಧಿಸಲಾಯ್ತು.



ಹೌದು, ಮತ್ತ್ಯಾಕ್ ತಡ. ನೀವೀಗ ಥೇಟ್ ಪಕ್ಷಿಗಳಂತೆ ಆಕಾಶದಲ್ಲಿ ಹಾರಾಡೋಕೆ ಸಿದ್ಧರಾಗಿ. ವಿಂಗ್​ ಸೂಟ್​ ಹೆಗಲಿಗೇರಿಸಿಕೊಂಡು ಆಕಾಶದಲ್ಲಿ ಒಮ್ಮೆ ತೇಲಾಡಿ ಬನ್ನಿ. ಈ ಜೀವನದ ಜಂಜಾಟಗಳಿಂದ ಒಂದಿಷ್ಟು ಹೊತ್ತು ಹೊಸ ಪ್ರಪಂಚದಲ್ಲಿ ವಿಹರಿಸಿ ಬನ್ನಿ. ಶುಭವಾಗಲಿ.

- ಅಮೃತ ಕಿರಣ ಬಿ.ಎಂ.