ಆಕಾಶದಿ ಹಾರಾಡುವಾ....
=============================
ಹಕ್ಕಿಗಳಂತೆ ಹಾರಾಡೋ ಕನಸನ್ನು ಕಂಡವರು ಈ ಜಗತ್ತಿನಲ್ಲಿ ಕೋಟಿಗಟ್ಟಲೆ ಜನ ಇದ್ದಾರೆ. ಇದೇ ಕನಸನ್ನ ಬೆನ್ನತ್ತಿ, ಹಕ್ಕಿ ಹಾಗೆ ಹಾರಾಡೋಕೆ ಯಾಕೆ ಸಾಧ್ಯ ಇಲ್ಲ ಅಂತಾ ಯತ್ನಿಸಿದವರಿಗೆ ಲೆಕ್ಕವೇ ಇಲ್ಲ. ನಮ್ಮಿಂದ ಎಲ್ಲಾದ್ರೂ ಉಂಟೇ ಅಂತ ಅಂದುಕೊಂಡು ಜೀವನ ಮುಗಿಸಿದವರೂ ಇದ್ದಾರೆ.
ಹನುಮಂತ, ಮಾರುತಿ, ಆಂಜನೇಯ ಮುಂತಾದ ಹೆಸರಿನಿಂದ ಕರೆಯಲ್ಪಡುವ ಭಾರತೀಯ ಪುರಾಣಗಳ ದೈತ್ಯ ಪ್ರತಿಭೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹನುಮಂತನಿಲ್ಲದಿದ್ದರೆ ರಾಮಾಯಣ ಕೂಡಾ ಸಪ್ಪೆ ಆಗುತ್ತಿತ್ತೋ ಎನಿಸುತ್ತದೆ. ಆಂಜನೇಯನ ಪರಾಕ್ರಮಗಳಲ್ಲಿ ಸಮುದ್ರೋಲ್ಲಂಘನ ಮಹತ್ವದ್ದು. ಸೀತೆಯನ್ನು ಹುಡುಕಲು 32 ಕಿಲೋಮೀಟರ್ ಸಮುದ್ರವನ್ನು ಒಂದೇ ನೆಗೆತಕ್ಕೆ ಹಾರಿದ್ದು ಎಂಥವರನ್ನೂ ಪುಳಕಿತಗೊಳಿಸುತ್ತದೆ. ನಮ್ಮ ಪುರಾಣಪುರುಷ ಮಾರುತಿಯ ಕಥೆಯನ್ನು ಚಿಕ್ಕಂದಿನಿಂದಲೂ ನಾವು ಕೇಳಿದ್ದೇವೆ. ವಿಶೇಷ ಅಂದ್ರೆ ವಾನರ ರೂಪದಲ್ಲಿದ್ದ ಹನುಮಂತ ಕೆಲವು ಸಾಧ್ಯತೆಗಳನ್ನು ತ್ರೇತಾಯುಗದಲ್ಲೇ ಸಾಧ್ಯವಾಗಿಸಿದ್ದಾನೆ.
ಯಾವುದೇ ಸಾಧನಗಳಿಲ್ಲದೆ ಆಕಾಶದಲ್ಲಿ ಹಾರಾಡುವ ಆಂಜನೇಯನ ಸಾಮರ್ಥ್ಯ ಬಹುಚರ್ಚಿತ ವಿಷಯ. ಪುಷ್ಪಕ ವಿಮಾನ ನೋಡಿ, ಅದೇ ಮಾದರಿಯ ವಿಮಾನವನ್ನು ಈಗಾಗಲೇ ರಚಿಸಿದ್ದಾಗಿದೆ. ಆಂಜನೇಯನಂತೆ ಒಬ್ಬಂಟಿಯಾಗಿ ಹಾರಾಡುವ ಕನಸು ಮಾನವನಿಗೆ ನನಸಾಗಿಯೇ ಉಳಿದಿತ್ತು. ನೂರಾರು ಸಂಶೋಧನೆಗಳು, ಪ್ರಯತ್ನಗಳ ಕೊನೆಗೂ ಫಲ ನೀಡಲಾರಂಭಿಸಿದವು. ತನ್ನ ಯತ್ನಕ್ಕೆ ಮಾನವ ಕ್ರಮೇಣ ಫಲ ಉಣ್ಣುತ್ತಾ ಬಂದ...
ದೇಶಗಳು ಬೇರೆಯಾದರೂ ಜನರ ಉತ್ಸಾಹ, ಕನಸು ಮಾತ್ರ ಒಂದೇ ಅಲ್ವಾ.. ಹೀಗಾಗಿ ಕನಸಗಳಿಗೆ ಮಾನವ ರೆಕ್ಕೆಪುಕ್ಕ ಕಟ್ಟಿ ಹಾರಾಟಕ್ಕೆ ಬಿಟ್ಟ. ಈ ಪ್ರಯತ್ನಗಳ ಫಲವಾಗಿ ಹಲವು ರೀತಿಯ ಗ್ಪೈಡರ್ ಮಾದರಿಯ ಯಂತ್ರಗಳು ಮಾನವನನ್ನು ಹೊತ್ತೊಯ್ಯಲು ಸಿದ್ಧವಾದವು. ಆಕಾಶದಲ್ಲಿ ಹಕ್ಕಿಯಂತೆ ಹಾರಾಡುವ ಮಾನವನ ಕನಸು ಅಲ್ಪಮಟ್ಟಿಗೆ ಸಾಕಾರಗೊಂಡಿತು.
ವಿವಿಧ ದೇಶಗಳಲ್ಲಿ ಹಲವು ಉತ್ಸಾಹಿಗಳು ವಿಧವಿಧದ ಗ್ಪೈಡರ್ಗಳನ್ನು ರೂಪಿಸಿದರು.
ಮಾನವನಿಗೆ ತೃಪ್ತಿ ಅನ್ನೋದು ಎಲ್ಲಾದ್ರೂ ಇದ್ಯಾ. ಅವನ ಉತ್ಸಾಹಕ್ಕೆ ಎಣೆಯೇ ಇಲ್ಲ. ಗ್ಪೈಡರ್ ರೀತಿಯ ಉಪಕರಣಗಳು ಹಾರಾಡಲು ಅಷ್ಟೊಂದು ಕಂಫರ್ಟಬಲ್ ಅಲ್ಲ ಅನಿಸೋಕೆ ಶುರುವಾಯ್ತು. ಯಂತ್ರವಿಲ್ಲದೇ ಥೇಟ್ ಹಕ್ಕಿಯಂತೆ ಹಾರಾಡಲೇಬೇಕು ಎಂದು ಪಣ ತೊಟ್ಟುಬಿಟ್ಟ. ಇನ್ನೂ ಏನಾದ್ರೂ ಹೊಸತು ಮಾಡಬೇಕೆಂಬ ಆಸೆ ಕಡಿಮೆ ಆಗಲಿಲ್ಲ. ಅಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆದ. ಅವಿರತ ಶ್ರಮದ ಬಳಿಕ ಸಿಕ್ಕಿದ್ದೇ ವಿಂಗ್ ಸೂಟ್ ಎಂಬ ಅಸ್ತ್ರ
ವಿಂಗ್ ಸೂಟ್. ಮಾನವ ರೂಪಿಸಿರುವ ಅತ್ಯಂತ ವಿಶಿಷ್ಠ ಅಸ್ತ್ರ. ತಾನು ಹಕ್ಕಿಯಂತೆ ಹಾರಾಡಬೇಕು, ಆಕಾಶದಲ್ಲಿ ತೇಲಾಡಬೇಕು, ಹಾರಾಡ್ತಾ ಹಾರಾಡ್ತಾ ಭೂಮಿಯನ್ನು ಸುತ್ತಬೇಕು ಎನ್ನುವ ಕನಸು ನನಸಾಗುವಂತೆ ಮಾಡಿದ ವಿಶಿಷ್ಟ ಉಪಕರಣವೇ ಈ ವಿಂಗ್ ಸೂಟ್. ಇದನ್ನು ಬರ್ಡ್ಮನ್ ಸೂಟ್, ಸ್ಕೇರಲ್ ಸೂಟ್ ಎಂದೂ ಕರೀತಾರೆ.
ಗ್ಪೈಡರ್. ಹೆಲಿಕಾಪ್ಟರ್, ಚಿಕ್ಕ ವಿಮಾನಗಳ ತಂತ್ರಜ್ಞಾನವನ್ನು ಬಳಸಿಕೊಂಡು ರೂಪಿಸಿದ ಅತ್ಯಂತ ಚಿಕ್ಕ ಹಾರುವ ಉಪಕರಣ ಅಥವಾ ಒಂದು ಬಗೆಯ ದಿರಿಸು. ಒಬ್ಬ ವ್ಯಕ್ತಿ ಕಂಫರ್ಟಬಲ್ ಆಗಿ ಆಗಸದಲ್ಲಿ ಹಾರಾಡಲು ಸಹಾಯ ಮಾಡುವ ವಿಶೇಷ ದಿರಿಸು ಈ ವಿಂಗ್ ಸೂಟ್. ವಿಂಗ್ ಸೂಟ್ ಧರಿಸಿ ಹಾರಾಡೋ ವ್ಯಕ್ತಿಗಳು ಥೇಟ್ ಕಾರ್ಟೂನ್ ಹೀರೋಗಳಂತೆ ಕಾಣ್ತಾರೆ. ಯಾವುದೇ ವಿಮಾನ ಅಥವಾ ಎಂಜಿನ್ ಅನ್ನು ತಮ್ಮ ಬೆನ್ನಿಗೆ ಅಂಟಿಸಿಕೊಳ್ಳದೇ ಆಕಾಶಕ್ಕೆ ಜಿಗೀತಾರೆ. ಪಕ್ಷಿಗಳನ್ನೂ ನಾಚಿಸುವಂತೆ ಹಾರಾಡ್ತಾರೆ. ವಿಂಗ್ ಸೂಟ್ ಧರಿಸಿ ಆಕಾಶಕ್ಕೆ ಜಿಗಿಯೋ ವ್ಯಕ್ತಿಗಳು ಥೇಟ್ ಪ್ಯಾರಾಚೂಟ್ ಥರಾನೇ ಕಾಣ್ತಾರೆ. ಅವರು ಪ್ಯಾರಾಚೂಟನ್ನು ತಮ್ಮೊಂದಿಗೆ ಕೊಂಡೊಯ್ದಿರ್ತಾರೆ.
ಪ್ಯಾರಾಚೂಟ್ಗೂ ವಿಂಗ್ ಸೂಟ್ಗೆ ವ್ಯತ್ಯಾಸವಿದೆ. ಪ್ಯಾರಾಚೂಟ್ ನಿಮ್ಮನ್ನು ಸೇಫ್ ಲ್ಯಾಂಡಿಂಗ್ ಮಾಡಿಸುತ್ತೆ ಅಷ್ಟೇ. ಮೇಲಿನಿಂದ ಪ್ಯಾರಾಚೂಟ್ ಕಟ್ಟಿಕೊಂಡು ನೀವು ಜಿಗಿದಾಗ ನಿಮ್ಮನ್ನು ಸುರಕ್ಷಿತವಾಗಿ ನೆಲಕ್ಕೆ ಮುಟ್ಟಿಸುತ್ತೆ. ಆದರೆ ವಿಂಗ್ ಸೂಟ್ ಹಾಗಲ್ಲ. ಇದರ ಉದ್ದೇಶವೇ ಬೇರೆ. ವಿಂಗ್ ಸೂಟ್ ಮನುಷ್ಯನನ್ನು ಆಗಸದಲ್ಲಿ ಹಾರಾಡಿಸುವ ವಿಶಿಷ್ಠ ಸಾಧನ. ಸ್ಕೈಡೈವಿಂಗ್ ಮಾಡುವಾಗ ತಾನು ಧರಿಸಿದ ವಿಂಗ್ ಸೂಟ್ ಹಾಗೂ ಮಡಚಿಟ್ಟುಕೊಂಡಿರುವ ಪ್ಯಾರಾಚೂಟ್ ಬಿಟ್ರೆ ಏನೂ ಇರೋದಿಲ್ಲ.
ವಿಂಗ್ ಸೂಟ್ ರಚನೆಯೇ ಬಲು ವಿಶಿಷ್ಟ. ವಿಂಗ್ ಸೂಟ್ ಧರಿಸಿ ಹಾರಾಡುವ ವ್ಯಕ್ತಿಯು ಥೇಟ್ ಹಕ್ಕಿಗಳ ರೀತಿಯೇ ಕಾಣುತ್ತಾನೆ. ಅವುಗಳ ರೆಕ್ಕೆಗಳ ರಚನೆಯನ್ನೇ ಮಾದರಿಯಾಗಿಟ್ಟುಕೊಂಡು ವಿಂಗ್ ಸೂಟ್ ಸಿದ್ಧಪಡಿಲಾಗಿದೆ. ಕೈ, ಕಾಲು ಹಾಗೂ ದೇಹವನ್ನು ಕೂಡಿಸಿದ ರೀತಿಯಲ್ಲಿ ಈ ದಿರಿಸನ್ನು ಹೊಲಿದಿರುತ್ತಾರೆ. ಆದರೆ ನಮ್ಮ ಅಂಗಿ, ಪ್ಯಾಂಟ್ ಹೊಲಿದಂತೆ ಅಲ್ಲ. ಇದಕ್ಕೆ ವಿಶಿಷ್ಟವಾದ ಬಟ್ಟೆ ಇರುತ್ತೆ. ಈ ದಿರಿಸಿನ ಒಳಗೆ ಒಂಚೂರೂ ಗಾಳಿ ನುಸುಳದಂತೆ ಅಚ್ಚುಕಟ್ಟಾಗಿ ಸಿದ್ಧಪಡಿಸಿರುತ್ತಾರೆ.
ವಿಂಗ್ ಸೂಟ್ ರಚನೆಯೇ ವಿಶಿಷ್ಠ. ವಿಂಗ್ ಸೂಟ್ ಧರಿಸಿ ಹಾರುವಾಗ ಇದು ಗಾಳಿಯನ್ನು ಮೇಲ್ಮುಖವಾಗಿ ಪ್ರಬಲವಾಗಿ ಒಳನುಗ್ಗಿಸುವಂತಹ ಕೆಲಸ ಮಾಡುತ್ತದೆ. ಹೊರಗಿನ ಗಾಳಿ ಒಳಗಡೆ ನುಸುಳದಂತೆ ಮಾಡುವ ವ್ಯವಸ್ಥೆಯೂ ಇದೆ. ಜೊತೆಗೆ ಒಳಗಿನ ಗಾಳಿಯನ್ನು ರಭಸವಾಗಿ ಹಾಗೂ ಮೇಲ್ಮುಖವಾಗಿ ತಿರುಗಿಸಿ ನುಗ್ಗಿಸುವಂತಹ ತಂತ್ರಜ್ಞಾನ ರೂಪಿಸಲಾಗಿರುತ್ತದೆ. ವಿಂಗ್ ಸೂಟ್ ಧರಿಸಿದ ವ್ಯಕ್ತಿಯ ಕೈ ಹಾಗೂ ಕಾಲುಗಳು ಮತ್ತು ದೇಹದ ಮಧ್ಯೆ ರಭಸವಾಗಿ ಗಾಳಿಯನ್ನು ನುಗ್ಗಿಸಲಾಗುತ್ತದೆ. ಒಂದು ವಿಮಾನ ಹಾರಲು ಅದಕ್ಕೆ ಬೇಕಾಗುವಷ್ಟು ಸಾಮರ್ಥ್ಯದ ಎಂಜಿನ್ ಅಳವಡಿಸಿರುತ್ತಾರೆ. ಹಾಗೆಯೇ ಒಬ್ಬ ವ್ಯಕ್ತಿ ವಿಂಗ್ಸೂಟ್ ಧರಿಸಿ ಹಾರುವಾಗ ಪ್ರಬಲವಾಗಿ ಗಾಳಿಯನ್ನು ನುಗ್ಗಿಸುವ ಸಾಮರ್ಥ್ಯವನ್ನು ವಿಂಗ್ಸೂಟ್ ಹೊಂದಿರುತ್ತದೆ. ವಿಮಾನದ ಎಂಜಿನ್ ವಿಮಾನವನ್ನು ಮೇಲಕ್ಕೆತ್ತುವಷ್ಟು ಸಮರ್ಥವಾಗಿರುತ್ತೆ. ಅದೇ ರೀತಿ ಒಬ್ಬ ಮನುಷ್ಯನನ್ನು ಆಗಸದಲ್ಲಿ ತೇಲಿಸುವಷ್ಟು ಶಕ್ತಿಶಾಲಿಯಾದ ತಂತ್ರಜ್ಞಾನ ಅಳವಡಿಸಿರುತ್ತಾರೆ. ಗಾಳಿಯ ಈ ಒತ್ತಡವು ವಿಂಗ್ ಸೂಟ್ ಧರಿಸಿದ ವ್ಯಕ್ತಿಯನ್ನು ಕ್ರಮೇಣ ಮೇಲ್ಮುಖವಾಗಿ ಒಯ್ಯುತ್ತದೆ. ಬೇಕಾದ್ರೆ ವೇಗವನ್ನು ಹೆಚ್ಚಿಸಿಕೊಳ್ಳುವಂತೆ, ಕಡಿಮೆ ಮಾಡುವಂತೆ ಕಂಟ್ರೋಲಿಂಗ್ ಸಿಸ್ಟಮ್ ಕೂಡಾ ಅಳವಡಿಸಲಾಗಿರುತ್ತೆ. ಹಾರಾಡುವಾಗ ದೇಹದ ಶೇಪ್ ಸ್ವಲ್ಪ ಚೇಂಜ್ ಮಾಡೋದ್ರಿಂದ ಎತ್ತರಕ್ಕೆ ಥ್ರಿಲ್ಲಿಂಗ್ ಅನುಭವ ಪಡೆಯಬಹುದು. ಈ ಎಲ್ಲಾ ತಂತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ರೆ, ಹಕ್ಕಿಯನ್ನೂ ನಾಚಿಸುವಂತೆ ಮಾನವ ಆಕಾಶದಲ್ಲಿ ಹಾರಾಡಬಹುದು. ಅಂದಂತೂ ಒಂದು ರೋಚಕ ಅನುಭವ.
ವಿಂಗ್ಸೂಟ್ ಆಗಸದಲ್ಲಿ ಹಾರಾಡುವಂತೆ ಅನುವುಮಾಡಿಕೊಡುವ ವಿಶೇಷ ಉಪಕರಣ ಅಷ್ಟೇ. ಆದ್ರೆ ಆಕಾಶಕ್ಕೆ ಜಿಗಿಯೋದಾದ್ರೂ ಹೇಗೆ ಅಲ್ವಾ...? ಈ ಪ್ರಶ್ನೆ ನಿಮ್ಮನ್ನು ಕಾಡೇ ಇರುತ್ತೆ. ಹೌದು, ಇದಕ್ಕೆ ಹಲವು ವಿಧಾನಗಳಿವೆ. ವಿಮಾನದಲ್ಲಿ ಹತ್ತಿ, ಅದು ಆಗಸದಲ್ಲಿ ಹಾರಾಡುತ್ತಿರಬೇಕಾದಾಗ ವಿಂಗ್ಸೂಟ್ ಧರಿಸಿ ವಿಮಾನದಿಂದ ಜಂಪ್ ಮಾಡಬಹುದು. ಆಗಸದಲ್ಲಿ ಹಾರಾಡಿ, ತೇಲಾಡಿ ಕೊನೆಗೆ ಭೂಮಿಗೆ ಇಳಿಯುವಾಗ ಪ್ಯಾರಾಚೂಟ್ ಬಿಚ್ಚಿದರೆ ಸೇಫ್ ಲ್ಯಾಂಡಿಂಗ್. ಇದು ಒಂದು ವಿಧಾನ. ಅದೇ ರೀತಿ ಹಾರಾಡುವ ಹೆಲಿಕಾಪ್ಟರ್ನಿಂದಲೂ ವಿಂಗ್ಸೂಟ್ ಧರಿಸಿ ಆಗಸಕ್ಕೆ ಜಿಗಿಯಬಹುದು. ಇದರ ಜೊತೆಗೆ ಅತ್ಯಂತ ಎತ್ತರದ ಕಟ್ಟಡದ ತುತ್ತತುದಿಯಲ್ಲಿರುವ ಪಾಯಿಂಟ್ನಿಂದ ಆಗಸಕ್ಕೆ ಜಿಗಿಯಬಹುದು. ಜೊತೆಗೆ ಎತ್ತರವಾದ ಬಂಡೆಗಳನ್ನೂ ಜಿಗಿಯಲು ಬಳಸಿಕೊಳ್ಳಬಹುದು.
ವಿಮಾನ, ಹೆಲಿಕಾಪ್ಟರ್, ಎತ್ತರದ ಕಟ್ಟಡ ಅಥವಾ ಬೃಹತ್ ಎತ್ತರದ ಬಂಡೆಗಳ ಮೇಲಿಂದ ವಿಂಗ್ಸೂಟ್ ಧರಿಸಿ ಒಮ್ಮೆ ಆಗಸಕ್ಕೆ ಜಿಗದರೆ ಮುಗೀತು. ನೀವು ಅಕ್ಷರಶಃ ಹಕ್ಕಿಯೇ ಸರಿ. ಬೇಕಾದಷ್ಟು ಸುತ್ತಾಡಿ, ಸುಸ್ತಾದಾಗ ನೀವು ಹೊತ್ತೊಯ್ದಿರುವ ಪ್ಯಾರಾಚೂಟ್ ಬಿಚ್ಚಿದರೆ ಸಾಕು, ನೀವು ಸುರಕ್ಷಿತವಾಗಿ ಭೂಮಿಗೆ ಮರಳುತ್ತೀರಾ. ಇದೊಂದು ಪಕ್ಕಾ ಟೆಕ್ನಿಕಲ್ ವರ್ಕ್. ಒಂಚೂರು ಲೆಕ್ಕ ತಪ್ಪದಿದ್ದರೆ ನೀವು ಸೇಫ್.
===============================
ವಿಂಗ್ ಸೂಟ್ ಪ್ರಸಿದ್ಧಿಗೆ ಬಂದಿದ್ದು 90ರ ದಶಕದ ಕೊನೆಯಲ್ಲಿ. ಸುಸಜ್ಜಿತ ವಿಂಗ್ ಸೂಟ್ ಮಾದರಿಯ ಉಡುಪನ್ನು ಸಿದ್ಧಪಡಿಸಿದ್ದು ಫಿನ್ಲೆಂಡ್ನ 'ಜಾರಿ ಕೌಸ್ಮಾ' ಮತ್ತು ಕ್ರೋವೇಷಿಯಾದ 'ರಾಬರ್ಟ್ ಪೆಕ್ನಿಕ್' ಎಂಬ ಉತ್ಸಾಹಿಗಳು. ಈ ಇಬ್ಬರಲ್ಲೂ ವಿಂಗ್ ಸೂಟ್ ಧರಿಸಿ ಹಾರಾಡೋ ಬಗ್ಗೆ ಅದೆಂತಹ ಆಸಕ್ತಿ ಇತ್ತೆಂದರೆ, ಇಬ್ಬರೂ ಸೇರಿ ಬರ್ಡ್ಮನ್ ಎಂಬ ಸಂಸ್ಥೆಯನ್ನೇ ಶುರು ಮಾಡಿಬಿಟ್ರು. ಇದು ವಿಂಗ್ ಸೂಟ್ ಇತಿಹಾಸದ ಮಹತ್ವದ ಹೆಜ್ಜೆ. ಈ ಮೊದಲು ಕೆಲವ ಉತ್ಸಾಹಿಗಳು ಆಕಾಶದಲ್ಲಿ ಹಾರಾಡಲು ಯತ್ನಿಸಿ ವಿಫಲರಾಗಿದ್ದರು. ಮೊಟ್ಟಮೊದಲ ವಿಶ್ವಾಸಾರ್ಹ ವಿಂಗ್ ಸೂಟ್ ದಿರಿಸು ಸಿದ್ಧಪಡಿಸಿದ್ದು ಬರ್ಡ್ಮನ್ ಸಂಸ್ಥೆಯ ಖ್ಯಾತಿ. ಇಲ್ಲಿಂದ ಸ್ಕೈ ಡೈವಿಂಗ್ನ ಹೊಸ ಅಧ್ಯಾಯವೇ ಆರಂಭವಾಯ್ತು.
ವಿಂಗ್ ಸೂಟ್ಗಳನ್ನು ಸಿದ್ಧಪಡಿಸುವುದು ಹಾಗೂ ಅವುಗಳನ್ನು ಮಾರಾಟ ಮಾಡುವುದು ಮತ್ತು ಉತ್ಸಾಹಿಗಳಿಗೆ ವಿಂಗ್ಸೂಟ್ ಹಾರಾಟಕ್ಕೆ ಟ್ರೈನಿಂಗ್ ಕೊಡುವುದು ಬರ್ಡ್ಮನ್ ಸಂಸ್ಥೆಯ ಉದ್ದೇಶ. ಮಕ್ಕಳು, ಯುವಕರು, ಮಹಿಳೆಯರು ಹೀಗೆ ನಾನಾ ಜಾಯಮಾನದ ವ್ಯಕ್ತಿಗಳಿಗೆ ಸೂಕ್ತವಾಗುವ ವಿಂಗ್ಸೂಟ್ಗಳನ್ನು ಸಿದ್ಧಪಡಿಸಿದ್ರು. ಆಸಕ್ತರಿಗೆ ಸೂಕ್ತ ತರಬೇತಿಯನ್ನೂ ನೀಡೋಕೆ ಶುರು ಮಾಡಿದ್ರು. ಬರ್ಡ್ಮನ್ ಕಂಪನಿ ವಿಂಗ್ಸೂಟ್ ಸಾಧನಗಳ ಹೊಸ ಹೊಸ ಆವಿಷ್ಕಾರಗಳನ್ನು ನಿರಂತರ ಮಾಡುತ್ತೆ. ಹಾಗೆಯೇ ಅವುಗಳನ್ನು ಪ್ರಯೋಗ ಮಾಡಿ ಮಾರುಕಟ್ಟೆಗೆ ಬಿಡುಗಡೆಮಾಡುತ್ತೆ. ಬರ್ಡ್ಮನ್ ಕಂಪನಿ ತಯಾರಿಸೋ ವಿಂಗ್ಸೂಟ್ ಬೆಲೆ 400 ರಿಂದ 1200 ಯೂರೋ. ಅಂದರೆ ಸರಿಸುಮಾರು 70 ಸಾವಿರ ರೂಪಾಯಿ.
ಪ್ಯಾರಾಚೂಟ್ನಿಂದ ಜಿಗಿಯೋದು ಕಾಮನ್. ಇದಕ್ಕೆ ಸೂಕ್ತ ತರಬೇತಿ ಬೇಕು. ವಿಂಗ್ಸೂಟ್ ಹಾರಾಟಕ್ಕೂ ಪ್ಯಾರಾಚೂಟ್ ಲರ್ನಿಂಗ್ ತುಂಬಾನೆ ಇಂಪಾರ್ಟೆಂಟ್. ಪ್ಯಾರಾಚೂಟ್ನಿಂದ ಜಿಗಿಯಲು ಕಲಿತವರಿಗೆ ಮಾತ್ರ ವಿಂಗ್ಸೂಟ್ ಹಾರಾಟ ಸುಲಭಸಾಧ್ಯ. ಏಕೆಂದ್ರೆ ವಿಂಗ್ಸೂಟ್ ಧರಿಸಿ ಹಾರಾಡಬೇಕಂದ್ರೆ, ಪ್ಯಾರಾಚೂಟ್, ವಿಮಾನ ಅಥವಾ ಎತ್ತರದ ಪ್ರದೇಶದಿಂದ ಜಿಗಿಯಬೇಕು. ಹೀಗೆ ಜಿಗಿಯೋದಕ್ಕೂ ವಿಶೇಷ ತರಬೇತಿ ಅತ್ಯಗತ್ಯ. ಬರ್ಡ್ಮನ್ ತರಹದ ಕಂಪನಿಗಳು ಇದಕ್ಕೆ ಟ್ರೈನರ್ಗಳನ್ನು ಒದಗಿಸಿ, ಸೂಕ್ತ ತರಬೇತಿ ನೀಡ್ತವೆ. ಅದಕ್ಕೆಂದೇ ಪ್ರತ್ಯೇಕ ಕ್ಲಾಸಸ್ ಕೂಡಾ ನಡೆಯುತ್ವೆ. ವಿಂಗ್ಸೂಟ್ ಧರಿಸಿ ಹಾರಾಡಬೇಕಂದ್ರೆ ಏನಿಲ್ಲವೆಂದ್ರೂ ಕನಿಷ್ಠ 200 ಬಾರಿಯಾದರೂ ಪ್ಯಾರಾಚೂಟ್ನಿಂದ ಜಿಗಿದಿರುವ ಅನುಭವ ಇರಬೇಕು. ಅದೂ 18 ತಿಂಗಳ ಒಳಗಡೆ ಈ ಸಾಧನೆ ಮಾಡಿರಬೇಕು. ಅದೂ ಟ್ರೈನರ್ ಜೊತೆಗೂಡಿ. ಇಲ್ಲದಿದ್ದರೆ ಒಬ್ಬಂಟಿಯಾಗಿ ವಿಂಗ್ಸೂಟ್ ಧರಿಸಿ ಹಾರಾಡೋದು ಅಷ್ಟೊಂದು ಸೇಫ್ ಅಲ್ಲ ಎಂಬುದು ತಜ್ಞರ ಅಭಿಮತ.
ಬರ್ಡ್ಮನ್ ಕಂಪನಿ ಸಿದ್ಧಪಡಿಸಿದ ವಿಂಗ್ಸೂಟ್ ತಯಾರು ಮಾಡುವ ಮೊದಲು ಸ್ಕೈಡೈವಿಂಗ್ಗೆ ಬಳಸಿದ ಉಪಕರಣಗಳು ತುಂಬಾ ವಿಶಿಷ್ಟವಾಗಿದ್ದವು. ಇದನ್ನ ಕೇಳಿದ್ರೆ ನಿಮಗೆ ನಗು ಬರಬಹುದು. ಆದ್ರೆ ಇದು ನಿಜ. ಕ್ಯಾನ್ವಾಸ್, ಕಟ್ಟಿಗೆ, ರೇಷ್ಮೆ, ಸ್ಟೀಲ್, ಹಾಗೂ ತಿಮಿಂಗಿಲದ ಮೂಳೆಯನ್ನು ಬಳಸಿ ವಿಂಗ್ ಸೂಟ್ ತಯಾರಿಸಲಾಗುತ್ತಿತ್ತು. ಆದರೆ ಇವಾವುವೂ ಅಷ್ಟೊಂದು ವಿಶ್ವಾಸಾರ್ಹ ಆಗಿರಲಿಲ್ಲ. ಇದು ವಿಂಗ್ ಸೂಟ್ನ ಆರಂಭಿಕ ಹಂತ. ವಿಂಗ್ ಸೂಟ್ ಕಲ್ಪನೆ ಅಂದು ತೀರಾ ಬಾಲಿಶ ಎಂದು ಪರಿಗಣಿತವಾಯ್ತು. ದಿನೇದಿನೇ ನಡೆದ ಹೊಸ ಪ್ರಯೋಗಗಳು ವಿಂಗ್ ಸೂಟ್ಗೆ ಒಂದು ಸ್ಪಷ್ಟ ರೂಪ ನೀಡಿದವು. ನಾವಿಂದು ಬಳಸುತ್ತಿರುವ ವಿಂಗ್ಸೂಟ್ ಅತ್ಯಂತ ಸುಧಾರಿತ ಸಾಧನ.
ವಿಂಗ್ ಸೂಟ್ ಧರಿಸಿದ ಮನುಷ್ಯ ಎಷ್ಟು ಹೊತ್ತು ಆಗಸದಲ್ಲಿ ತೇಲಬಹುದು ಅನ್ನೋ ಕುತೂಹಲ ಸಹಜ. ಹನುಮಂತ ವಿಂಗ್ ಸೂಟ್ ಇಲ್ಲದೆಯೇ 32 ಕಿಮೀ ದೂರ ಆಗಸದಲ್ಲಿ ಕ್ರಮಿಸಿದ್ದ. ಆದರೆ ಮಾನವನಿಂದ ಇದು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆಗಸದಲ್ಲಿ ಮಾನವನ ಈವರೆಗಿನ ಹಾರಾಟದ ದಾಖಲೆ ಅಂದ್ರೆ, 20.5 ಕಿಲೋಮೀಟರ್!. ಅಚ್ಚರಿ ಎನಿಸಿದ್ರೂ ಇದು ನಿಜ. ಗಿಬ್ರಾಲ್ಟರ್ ಜಲಸಂಧಿಯ ಒಂದು ತುದಿಯಿಂದ ಮತ್ತೊಂದು ತುದಿಗೆ ವಿಂಗ್ ಸೂಟ್ ದಿರಿಸು ಧರಿಸಿ ನಡೆಸಿದ ಹಾರಾಟ ಯಶಸ್ವಿಯಾಗಿದೆ. ಸ್ಪೇನ್ ದೇಶದ ಅಲ್ವಾರೋ ಬುಲ್ಟೋ, ಸ್ಯಾಂಟಿ ಕೊರೆಲ್ಲಾ ಮತ್ತು ಟೋನಿ ಲೊಪೆಜ್ ಎಂಬ ಉತ್ಸಾಹಿಗಳು 2005ರಲ್ಲಿ ಈ ಸಾಧನೆಗೈದರು. ಇವರು ಜಿಗಿದದ್ದು 32 ಸಾವಿರ ಅಡಿ ಎತ್ತರದಿಂದ. ಇಷ್ಟು ದೂರು ಹಾರಲು ಸಾಕಷ್ಟು ಎನರ್ಜಿ ಬೇಕೇ ಬೇಕು. ಅಷ್ಟೇ ಅಲ್ಲ, ಹಾರಾಟದಲ್ಲಿ ಸಾಕಷ್ಟು ಅನುಭವವೂ ಅತ್ಯಗತ್ಯ. ನೀರಿನ ಮೇಲೆ ವಿಂಗ್ಸೂಟ್ ಲ್ಯಾಂಡಿಂಗ್ ಸೇಫ್ ಅಲ್ಲ ಎಂಬುದು ತಜ್ಞರ ಅಭಿಮತ.
ವಿಂಗ್ಸೂಟ್ ಧರಿಸಿ ಆಕಾಶಕ್ಕೆ ನೆಗೆದಾಗ ಸ್ಕೈ ಡೈವರ್ನ ಹೊಟ್ಟೆ ಭೂಮಿಗೆ ಅಭಿಮುಖವಾಗಿರಬೇಕು ಎಂಬುದು ಇದರ ಸಾಮಾನ್ಯ ನಿಯಮ. ಒಂದು ಬಾರಿ ಭೂಮಿಯೆಡೆಗೆ ನೆಗೆದಾಗ ಗಂಟೆಗೆ ಸುಮಾರು 200 ಕಿಲೋಮೀಟರ್ ವೇಗವನ್ನು ಅವನು ಗಳಿಸಿರುತ್ತಾನೆ. ಇಷ್ಟೊಂದು ವೇಗವನ್ನು ನಿಯಂತ್ರಿಸುವುದು ಅವನ ಮುಂದಿರುವ ಅತ್ಯಂತ ದೊಡ್ಡ ಸವಾಲು. ವಿಂಗ ಸೂಟ್ ಎಂದ ದಿರಿಸು ಗರಿಷ್ಠ ವೇಗವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿರುತ್ತದೆ. ಕನಿಷ್ಟ 45 ಕಿಲೋಮೀಟರ್ಗೆ ವೇಗವನ್ನು ತಗ್ಗಿಸಲು ಸಾಧ್ಯ.
ಸರಿ ಸ್ಕೈ ಡೈವಿಂಗ್ನಲ್ಲಿ ಈಗ ಪರಿಣಿತಿ ಪಡೆದಿದ್ದಾಯ್ತು. ಮಾನವನ ಕನಸೂ ಈಡೇರಿತು. ಇಷ್ಟೇ ಆದ್ರೆ ಥ್ರಿಲ್ ಎಲ್ಲಿರುತ್ತೆ. ಏನಾದ್ರೂ ಹೋಸಾದನ್ನು ಮಾಡಬೇಕಲ್ವಾ. ಸ್ಕೈ ಡೈವಿಂಗ್ ಚರಿತ್ರೆಯಲ್ಲಿ ಪೋಲೆಂಡ್ ಉತ್ಸಾಹಿಗಳು ಒಂದು ಸಾಹಸವನ್ನೇ ಮೆರೆದಿದ್ದಾರೆ. ಒಟ್ಟು 104 ಸ್ಕೈ ಡೈವರ್ಸ್ ಒಟ್ಟುಗೂಡಿ ಒಂದೇ ಬಾರಿ ಆಗಸಕ್ಕೆ ನೆಗೆದು ಕೈಕೈ ಹಿಡಿದು ಹಾರಾಡಿದ್ರು. ಇದಂತೂ ಅವಿಸ್ಮರಣೀಯ ಅನುಭವ ಅಂತಾರೆ ಈ ತಂಡದ ಕ್ಯಾಪ್ಟನ್. ವಿಶೇಷ ಅಂದ್ರೆ ಈವರೆಗೆ ಇದ್ದ 99 ಜನರ ದಾಖಲೆ ಮುರಿದದ್ದು. ಈ ದಾಖಲೆ ಮುರಿಯಲು ಈ ತಂಡ ಪಡಿಪಾಟಲು ಅಷ್ಟಿಷ್ಟಲ್ಲ. ಬರೋಬ್ಬರಿ 14 ಬಾರಿ ಯತ್ನಿಸಿ ವಿಫಲವಾಗಿದ್ದ ಈ ತಂಡ 15ನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದೆ. ಎಲ್ಲರೂ ಒಟ್ಟಾಗಿ ಆಗಸದಿಂದ ಭೂಮಿಯನ್ನು ಸುತ್ತುಹಾಕೋದು ಮರೆಯಲಾರದ ಕ್ಷಣ.
ಜಾರಿ ಕೌಸ್ಮಾ ಸ್ಕೈ ಡೈವಿಂಗ್ನಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ಸುಮಾರು 2 ಸಾವಿರ ಬಾರಿ ಅವರು ವಿಂಗ್ ಸೂಟ್ ಹೆಗಲಿಗೇರಿಸಿಕೊಂಡು ಆಗಸಕ್ಕೆ ನೆಗೆದಿದ್ದಾರೆ. ಒಟ್ಟು 3 ಸಾವಿರ ಬಾರಿ ಪ್ಯಾರಾಚೂಟ್ನಿಂದ ಜಿಗಿದಿದ್ದಾರೆ. ಇಷ್ಟೊಂದು ಅನುಭವ ಪಡೆದಿರುವ ಕೌಸ್ಮಾ ಯುವ ಸ್ಕೈ ಡೈವರ್ಸ್ಗೆ ಸ್ಫೂರ್ತಿದಾಯಕ. ಸ್ಕೈ ಡೈವಿಂಗ್ ತರಬೇತಿಯಲ್ಲಿ ಆತ ಸಿದ್ಧಹಸ್ತ. ಎಲ್ಲಾ ದೇಶಗಳಲ್ಲೂ ಉತ್ತಮ ತರಬೇತಿ ನೀಡುವ ನೂರಾರು ಕ್ಲಬ್ಗಳಿವೆ, ಸಂಸ್ಥೆಗಳಿವೆ. ಪ್ರತಿನಿತ್ಯ ನೂರಾರು ತರುಣರು ತರಬೇತಿ ಪಡೆದು ಆಗಸಕ್ಕೆ ಜಿಗಿಯುತ್ತಿದ್ದಾರೆ.
ಆಗಸದಲ್ಲಿ ಹಾರಾಡುವಾಗ ಇಷ್ಟೊಂದು ಖುಷಿ ನೀಡುವ ವಿಂಗ್ಸೂಟ್ ಹಲವರ ಪ್ರಾಣವನ್ನೂ ಕಳೆದಿದೆ. ಅಮೆರಿಕಾ, ಇಟಲಿ, ಚೀನಾ, ನ್ಯೂಜಿಲೆಂಡ್ ಮೊದಲಾದೆಡೆ 12 ಮಂದಿ ಅಸುನೀಗಿದ್ದಾರೆ ಎಂಬ ಮಾಹಿತಿ ಇದೆ. ಆಗಸದಲ್ಲಿ ತೇಲಾಡುವ ಮನುಷ್ಯನ ಉತ್ಸಾಹ ಜೀವವನ್ನೂ ತೆಗೆದಿದೆ. ಸ್ಕೈ ಡೈವಿಂಗ್ ನಾವಂದುಕೊಂಡಷ್ಟು ಸುಲಭ ಅಲ್ಲ. ನಾವಂದುಕೊಂಡದ್ದನ್ನು ಸಾಧ್ಯವಾಗಿಸಲು ಒಂದು ತಪಸ್ಸಿನಂತೆ ಆಚರಿಸಬೇಕು. ಆಗಸಕ್ಕೆ ಜಿಗಿದಾಗ ಕೈಗಳನ್ನು ರೆಕ್ಕೆ ರೀತಿ ನಿಯಮಿತವಾಗಿ ಹಿಡಿದಿರಬೇಕಾಗುತ್ತೆ. ಇಲ್ಲಿ ಕೈಗಳ ಸ್ನಾಯುಗಳು ತೀವ್ರ ಒತ್ತಡಕ್ಕೆ ಒಳಗಾಗಿ ಪ್ರಾಣಾಪಾಯದ ಭೀತಿ ಎದುರಾಗುತ್ತೆ. ಆಗಲೇ ಅವಘಡ ಸಂಭವಿಸೋದು. ಸಾಕಷ್ಟು ಪೂರ್ವ ತಯಾರಿ ಇಲ್ಲದೆ ಆಗಸಕ್ಕೆ ಜಿಗಿಯೋದು ಸೂಕ್ತವಲ್ಲ.
ಇದು ಜಗತ್ತಿನ ಕಥೆಯಾಯ್ತು. ನಮ್ಮ ದೇಶದಲ್ಲಿ ಸ್ಕೈ ಡೈವಿಂಗ್ ಏನಾದ್ರೂ ಅವಕಾಶ ಇದೆಯಾ ಎಂಬ ಕುತೂಹಲ ಇದೆ ಅಲ್ವಾ... ಭಾರತವೇನೂ ಕಡಿಮೆಯಿಲ್ಲ. ಭಾರತದಲ್ಲಿ ಇಂಡಿಯನ್ ಪ್ಯಾರಾಚೂಟ್ ಫೆಡರೇಷನ್ ಎಂಬ ಅತ್ಯುತ್ತಮ ಸಂಸ್ಥೆಯನ್ನು ಕಟ್ಟಿ, ಸ್ಕೈ ಡೈವಿಂಗ್ಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸ್ಕೈಡೈವಿಂಗ್, ಪ್ಯಾರಾಸೈಲಿಂಗ್, ಪ್ಯಾರಾ ಗ್ಲೈಡಿಂಗ್ ಮೊದಲಾದ ಸಾಹಸ ಕ್ರೀಡೆಗಳನ್ನು ಉತ್ಸಾಹಿಗಳು ಆಯ್ದುಕೊಳ್ಳುತ್ತಿದ್ದಾರೆ. ಫೆಡರೇಷನ್ ಅಷ್ಟೇ ಅಲ್ಲದೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲೂ ಸ್ಕೈಡೈವಿಂಗ್ಗೆ ಉತ್ತೇಜನ ನೀಡಲಾಗುತ್ತಿದೆ. ಆದರೆ ವಿದೇಶಗಳಷ್ಟು ಫೇಮಸ್ ಆಗಿಲ್ಲ. ಸ್ಕೈಡೈವಿಂಗ್ಗೆ ತಗುಲುವ ಖರ್ಚು ಉತ್ಸಾಹಿಗಳು ಹಿಂದೇಟು ಹಾಕುವಂತೆ ಮಾಡುತ್ತೆ. ವಿಂಗ್ ಸೂಟ್ ದಿರಿಸು ಖರೀದಿಸಲು ಹಾಗೂ ತರಬೇತಿಗೆ ಸಾಕಷ್ಟು ಹಣ ಬೇಕು. ವಿಂಗ್ ಸೂಟ್ ಧರಿಸಿ ಆಗಸಕ್ಕೆ ಜಿಗಿಯಲು ಹೆಲಿಕಾಪ್ಟರ್, ವಿಮಾನಗಳು ಬೇಕು. ಅಥವಾ ಬಿಸಿಗಾಳಿ ಬಲೂನು ಬೇಕು. ಸಾಮಾನ್ಯ ಭಾರತೀಯರಿಗೆ ಇದು ನಿಲುಕದ್ದು. ಹಣವಂತರು ಮಾತ್ರ ಈ ಸಾಹಸಕ್ಕೆ ಕೈಹಾಕಲು ಸಾಧ್ಯ.
ಸ್ಕೈ ಡೈವಿಂಗ್ ದಿನೇ ದಿನೇ ಹೊಸ ಹೊಸ ತಂತ್ರಜ್ಞಾನಗಳಿಗೆ ಮೈಯೊಡ್ಡುತ್ತಿದೆ. ಸುರಕ್ಷಿತ ಸ್ಕೈ ಡೈವಿಂಗ್ಗೆ ಕಂಪ್ಯೂಟರ್ ಬಳಕೆ ಹೊಸ ಸಾಧ್ಯತೆ. ಸ್ಕೈ ಡೈವಿಂಗ್ ಹಾರಾಟಕ್ಕೆ ಸೂಕ್ತ ಮಾಹಿತಿ ಕಲೆಹಾಕಿ, ಅದನ್ನು ಕಂಪ್ಯೂಟರ್ ಸಹಾಯದಿಂದ ವಿಶ್ಲೇಷಿಸಲಾಗುತ್ತದೆ. ಅಂದರೆ ಯಾವ ಌಂಗಲ್ನಲ್ಲಿ ಸ್ಕೈ ಡೈವರ್ ಸಾಗಬೇಕು, ಎಷ್ಟು ಸ್ಪೀಡ್ ಗಳಿಸಬೇಕು ಅಥವಾ ಕಡಿತಗೊಳಿಸಬೇಕು, ಎಲ್ಲೆಲ್ಲಿ ತಿರುವುಗಳನ್ನು ಪಡೆದು ಸಾಗಬೇಕೆಂಬ ಎಂಬಂತಹ ಕರಾರುವಕ್ ಮಾಹಿತಿ ಬೇಕು. ಎಲ್ಲಾ ಡೇಟಾಗಳನ್ನು ಸಂಗ್ರಹಿಸಿ ಹಾರಾಡುವಾಗ ಅಳವಡಿಸಿಕೊಳ್ಳಲಾಗುತ್ತೆ. ಇತ್ತೀಚೆಗಂತೂ ಜಿಪಿಎಸ್ ತಂತ್ರಜ್ಞಾನ ಹೆಚ್ಚು ವಿಶ್ವಾಸಾರ್ಹ ಎನಿಸಿದೆ. ಹಾರಾಟದಲ್ಲಿ ಜಿಪಿಎಸ್ ತಂತ್ರಜ್ಞಾನದಿಂದಾಗಿ ಹಾರಾಟದ ಪ್ರಮುಖ ಅಂಶಗಳನ್ನೂ ಪ್ರತೀ ಕ್ಷಣವೂ ಒದಗಿಸಲಾಗುತ್ತದೆ.
ವಿಂಗ್ ಸೂಟ್ ಮುಂದಿನ ಆವೃತ್ತಿ ಜಟ್ ಪವರ ವಿಂಗ್ ಸೂಟ್. ಹೌದು ವಿಮಾನಗಳಿಗೆ ಎಂಜಿನ್ ಜೋಡಿಸಿದಂತೆ ಮನುಷ್ಯನಿಗೆ ಜೋಡಿಸಿದರೆ ಹೇಗಿರುತ್ತೆ. ಇಂಥಾ ಕಲ್ಪನೆಯನ್ನು ಸಾಧ್ಯವಾಗಿಸಿ ಪ್ರಯೋಗಿಸಿ, ಯಶಸ್ವಿಯೂ ಆಗಿದ್ದಾಗಿದೆ. ಆದರೆ ಇದು ಅತ್ಯಂತ ದುಬಾರಿ ಸಾಹಸ ಹಾಗೂ ಇನ್ನಷ್ಟು ತಾಂತ್ರಿಕ ನೈಪುಣ್ಯತೆ ಬೇಕು.ವೆಸ್ ರೋಸಿ ಎಂಬಾತ ಜೆಟ್ ಎಂಜಿನ್ ಧರಿಸಿಕೊಂಡು ಸುಮಾರು 8 ನಿಮಿಷಗಳ ಕಾಲ ಸ್ವಿಸ್ ಅಲ್ಫ್ಸ್ ಶ್ರೇಣಿಯಲ್ಲಿ ನಡೆಸಿದ ಹಾರಾಟ ಐತಿಹಾಸಿಕ ಸಾಹಸ ಎಂದೇ ಬಿಂಬಿತವಾಯ್ತು. ಜೆಟ್ ಎಂಜಿನ್ ಸಹಾಯದಿಂದ 160 ಕಿಲೋಮೀಟರ್ ವೇಗದ ಸಮತಲ ಹಾರಾಟವನ್ನು ಸಾಧಿಸಲಾಯ್ತು.
ಹೌದು, ಮತ್ತ್ಯಾಕ್ ತಡ. ನೀವೀಗ ಥೇಟ್ ಪಕ್ಷಿಗಳಂತೆ ಆಕಾಶದಲ್ಲಿ ಹಾರಾಡೋಕೆ ಸಿದ್ಧರಾಗಿ. ವಿಂಗ್ ಸೂಟ್ ಹೆಗಲಿಗೇರಿಸಿಕೊಂಡು ಆಕಾಶದಲ್ಲಿ ಒಮ್ಮೆ ತೇಲಾಡಿ ಬನ್ನಿ. ಈ ಜೀವನದ ಜಂಜಾಟಗಳಿಂದ ಒಂದಿಷ್ಟು ಹೊತ್ತು ಹೊಸ ಪ್ರಪಂಚದಲ್ಲಿ ವಿಹರಿಸಿ ಬನ್ನಿ. ಶುಭವಾಗಲಿ.
- ಅಮೃತ ಕಿರಣ ಬಿ.ಎಂ.
.jpg)



No comments:
Post a Comment