Thursday, April 5, 2012

ತೇಜಸ್ವಿ ಎಂಬ ಕೌತುಕ

'ಕುತೂಹಲದ ಜೊತೆ ಶ್ರದ್ಧೆ ಮಿಳಿತವಾದರೆ ಅಲ್ಲೊಬ್ಬ ತೇಜಸ್ವಿ ಇರುತ್ತಾರೆ'

ತೇಜಸ್ವಿ ಎಂಬ ವಿಸ್ಮಯ ಮರೆಯಾಗಿ ಇಂದಿಗೆ ಸರಿಯಾಗಿ 5 ವರ್ಷ. ಅವರು ಇಲ್ಲದ ನಾಡಿನಲ್ಲಿ ನಾವು ಭರ್ತಿ 5 ವರ್ಷಗಳನ್ನು ಕಳೆದುಬಿಟ್ಟಿದ್ದೇವೆ. ಅವರು ದೈಹಿಕವಾಗಿ ಇಲ್ಲದಿದ್ದರೂ ನಮ್ಮೊಂದಿಗೆ ಸದಾ ಇರುತ್ತಾರೆ ಎಂಬ ಮಾತಿನಲ್ಲಿ ಸತ್ಯ ಇಲ್ಲದಿಲ್ಲ. ಅವರು ತಮ್ಮ ಸಹಜ ಬರವಣಿಗೆ ಮೂಲಕ ನಮ್ಮನ್ನು ಇನ್ನೂ ಚಕಿತಗೊಳಿಸುತ್ತಲೇ ಇದ್ದಾರೆ, ಮುಂದೆಯೂ ಇರುತ್ತಾರೆ.
'ಕನ್ನಡದಲ್ಲಿ ಏನೂ ಇಲ್ಲ, ಇರುವುದೆಲ್ಲವೂ ಬೂಸಾ ಎನ್ನುವವರು ಹಾಗೂ ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರು ಕೊಂಚ ವಿವೇಕ ತೋರಿ ಮೌನವಹಿಸಿದರೆ ನಮ್ಮ ಅಗಾಧ ರಚನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ' - ಇದು ಪೂರ್ಣಚಂದ್ರ ತೇಜಸ್ವಿ ಅವರ ಮನವಿಪೂರ್ವಕ ಆಗ್ರಹ. ಮಾಡುವುದನ್ನು ಬಿಟ್ಟು ಕೇವಲ ಆಡುವುದರಲ್ಲೇ ಕಾಲಕಳೆದು ದೊಡ್ಡವರೆನಿಸಿಕೊಳ್ಳಲು ಯತ್ನಿಸುವ 'ಬುದ್ಧಿಜೀವಿ'ಗಳಿಗೆ ತೇಜಸ್ವಿ ಬಿಸಿ ಮುಟ್ಟಿಸಿದ್ದಾರೆ.
ಯಾವುದೇ ಪ್ರಶಸ್ತಿಗೆ ಅಪೇಕ್ಷೆ ಪಡೆದೆ, ಪ್ರಶಸ್ತಿ ಕೊಟ್ಟರೂ ತೆಗೆದುಕೊಳ್ಳದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ತೇಜಸ್ವಿ ಅಗ್ರಗಣ್ಯರು. ಎಲ್ಲ ಸಾಹಿತಿಗಳು ಸ್ವಲ್ಪ ಹೆಸರು ಮಾಡುತ್ತಿದ್ದಂತೆ ಬೆಂಗಳೂರು ಸೇರಿಬಿಡುವುದು ವಾಡಿಕೆ ಎಂಬಂತಾಗಿದ್ದ ದಿನಗಳಲ್ಲೇ ತೇಜಸ್ವಿ ವೈರುಧ್ಯ ದಿಕ್ಕಿನಲ್ಲಿ ನಡೆದವರು. ನಗರ ಪ್ರದೇಶ ತೊರೆದು ದಟ್ಟ ಕಾನನವನ್ನು ಅರಸಿ ಅವರು ಮೂಡಿಗೆರೆಗೆ ಅಡಿಯಿಟ್ಟರು. ಅವರ ಸಹಜ ಕುತೂಹಲವೇ ಅವರ ಎಲ್ಲ ಕೆಲಸಗಳಿಗೆ ಪ್ರೇರಣೆ. ಶ್ರದ್ಧೆಗೆ ಮತ್ತೊಂದು ಹೆಸರೇ ತೇಜಸ್ವಿ. ಕುತೂಹಲದ ಜೊತೆ ಶ್ರದ್ಧೆ ಮಿಳಿತವಾದರೆ ಒಬ್ಬ ತೇಜಸ್ವಿ ಹುಟ್ಟುತ್ತಾರೆ. ಓದುಗರಲ್ಲಿ ಸಹಜವಾಗಿಯೇ ಕುತೂಹಲ ಸೃಷ್ಟಿಸುತ್ತಾ ಹೋಗುವ ಅವರ ಬರವಣಿಗೆಯೇ ಒಂದು ಕೌತುಕ.
ತೇಜಸ್ವಿ ಬರವಣಿಗೆ ನಿಂತಿದೆ. ಅವರ ವಿಚಾರಧಾರಗಳು ನಿಂತಿಲ್ಲ. ಪ್ರತಿ ಬಾರಿ ಓದಿದಾಗಲೂ ಹೊಸ ಹೊಳಹು ತೆರೆದುಕೊಳ್ಳುತ್ತದೆ. ಮತ್ತೊಂದು ಕೌತುಕ ಮಾತನಾಡುತ್ತದೆ. ನಮಗೆ ಕಾಣದ ಯಾವುದೋ ಕಣ್ಣು ಅಲ್ಲಿ ಪಿಳಿಪಿಳಿ ಎನ್ನುತ್ತಿರುತ್ತೆ. ತಮ್ಮ ಸುತ್ತಮುತ್ತಲ ಬದುಕನ್ನೇ ವರ್ಣರಂಜಿತ ಕಾವ್ಯವಾಗಿಸಿದವರು ತೇಜಸ್ವಿ. ಯಾರನ್ನೂ ಮೆಚ್ಚಿಸಲೆಂದೋ, ಓಲೈಸಲೆಂದೋ ಅವರು ಬರೆದವರಲ್ಲ. ಅವರ ಜೀವನಪ್ರೀತಿಯೇ ನಮ್ಮೆಲ್ಲರಿಗೆ ಸದಾ ಸ್ಫೂರ್ತಿ. ತೇಜಸ್ವಿ ಮತ್ತೊಮ್ಮೆ ಹುಟ್ಟಿ ಬರಲಿ.


-ಅಮೃತ ಕಿರಣ. ಬಿ.ಎಂ.

No comments:

Post a Comment