ಪ್ರತಿಯೊಬ್ಬ ಭಾರತೀಯನ ಹಬ್ಬ. ಅದುವೇ ಸ್ವಾತಂತ್ರ್ಯ ದಿನೋತ್ಸವ. ಪ್ರಧಾನಿ ಗದ್ದುಗೆ ಏರಿರುವ ನರೇಂದ್ರ ಮೋದಿ ಇವತ್ತು ದೆಹಲಿಯ ಕೆಂಪು ಕೋಟೆಯಲ್ಲಿ ಚೊಚ್ಚಲ ಬಾರಿ ಧ್ವಜಾರೋಹಣ ಮಾಡಿದ್ರು. ಸಿದ್ಧಪಡಿಸಿದ ಭಾಷಣ ಓದುವ ಸಂಪ್ರದಾಯಕ್ಕೆ ಕೊನೆ ಹಾಡಿದ ಮೋದಿ, ನಿರರ್ಗಳ ವಾಗ್ಝರಿ ಮೂಲಕ ಭವ್ಯ ಭವಿತವ್ಯದ ಕಣಸುಗಳನ್ನು ಬಿಚ್ಚಿಟ್ರು. ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ನೀಲ ನಕ್ಷೆಯನ್ನು ಹರಿವಿದ್ರು. ಡಿಜಿಟಲ್ ಇಂಡಿಯಾ, ಕ್ಲೀನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಎಂಬ ಪರಿಕಲ್ಪನೆಯನ್ನು ಅನಾವರಣ ಮಾಡಿದ್ರು. ಭಾರತ ದೇಶ ಎಲ್ಲ ಕ್ಷೇತ್ರಗಳಲ್ಲೂ ಸ್ವಾವಲಂಬನೆಯಾಗಬೇಕು. ಅಂಥ ವಸ್ತುಗಳ ಉತ್ಪಾದನೆಗೆ ಇಂಬು ಕೊಡೋದಾಗಿ ಪ್ರಧಾನಿ ಭರವಸೆ ಕೊಟ್ರು. ಮೋದಿ ತಮ್ಮ ಮಾತಿನುದ್ದಕ್ಕೂ ಇಂಥ ದೂರದರ್ಶಿತ್ವದ ನಡೆ ಪ್ರದರ್ಶಿಸಿದ್ರು. ಸಂಸತ್ ಆದರ್ಶ್ ಗ್ರಾಮ ಹಾಗೂ ‘ಜನ್ ಧನ್’ ಎಂಬ ಹೊಸ ಯೋಜನೆಗಳನ್ನು ಮೋದಿ ಪ್ರಕಟಿಸಿದ್ರು. ಪ್ರತಿ ಸಂಸದನೂ ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಅದರ ಸರ್ವತೋಮುಖ ಅಭಿವೃದ್ಧಿ ಮಾಡಬೇಕು. ಇದು ಈ ಯೋಜನೆಯ ಸ್ವರೂಪ. ಬಡತನ ನಿರ್ಮೂಲನೆಗೆ ಪಣ ತೊಡಲಾಗಿದೆ. ಬಡವರಿಗೆ ಒಂದು ಲಕ್ಷ ರೂಪಾಯಿವರೆಗೆ ವಿಮೆ ಮಾಡಿಸೋದಾಗಿ ಮೋದಿ ಇದೇ ವೇಳ ಘೋಷಿಸಿದ್ರು. ದೇಶದ ಎಲ್ಲರಿಗೂ ಬ್ಯಾಂಕ್ ಖಾತೆ ಹಾಗೂ ಉಚಿತ ಇನ್ಷೂರೆನ್ಸ್ ಸರ್ಕಾರದ ಆದ್ಯತೆ ಎಂದು ಹೇಳಿದ್ರು. ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ನಾಚಿಕೆ ಹುಟ್ಟಿಸುತ್ತಿದ್ದು, ಪೋಷಕರು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಅರಿಬೇಕಿದೆ. ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ಪಣ ತೊಟ್ಟಿದೆ ಎಂದು ಮೋದಿ ಅಭಯ ನೀಡಿದ್ರು. ಭಾರತವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವ ಸಂಕಲ್ಪ ಮಾಡಿದ್ದು, ಆರ್ಥಿಕ ಬೆಳವಣಿಗೆ ಸಾಧಿಸುವುದು ಪ್ರಮುಖ ಅಜೆಂಡಾ. ಹೀಗಾಗಿ ಕೆಲವೊಂದು ಅಗತ್ಯ ಬದಲಾವಣೆಗಳಿಗೂ ಕೇಂದ್ರ ಅಡಿಯಿಟ್ಟಿದೆ. ಯೋಜನಾ ಆಯೋಗದ ಬದಲು ಹೊಸ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಯುವ ಜನಾಂಗವೇ ನಮ್ಮ ದೇಶದ ಭುಜಬಲ. ಹಿಂಸೆಯಿಂದ ನಾವು ಸಾಧಿಸುವುದು ಏನೂ ಇಲ್ಲ. ಹೀಗಾಗಿ ಶಸ್ತ್ರ ತ್ಯಜಿಸಿ ಶಾಸ್ತ್ರವನ್ನು ಅನುಸರಿಸಬೇಕು ಎಂದು ಮಾವೋವಾದಿಗಳಿಗೆ ಮೋದಿ ಇದೇ ವೇಳೇ ಕರೆ ನೀಡಿದ್ರು. ಸದಾ ಕಾಲ್ಕೆರೆದು ಬರುವ ನೆರೆ ರಾಷ್ಟ್ರಕ್ಕೆ ಮೋದಿ ಇಂದೇ ಬಿಸಿ ಮುಟ್ಟಿಸಿದ್ರು. ಕೆಂಪುಕೋಟೆಯಲ್ಲಿ ಪಾಕಿಸ್ತಾನಕ್ಕೂ ಮೋದಿ ಬುದ್ಧಿಮಾತು ಹೇಳಿದ್ರು. ಸ್ವಾತಂತ್ರ್ಯಕ್ಕಾಗಿ ಒಟ್ಟಾಗಿ ರಕ್ತ ಹರಿಸಿದ್ದೇವೆ. ಸ್ವಾತಂತ್ರ್ಯ ನಂತರ ಯಾಕೆ ನಮ್ಮ ನಮ್ಮಲ್ಲಿ ಯುದ್ಧ ಎಂದು ಪ್ರಶ್ನೆ ಮಾಡಿದ ಮೋದಿ, ಅಭಿವೃದ್ಧಿಗಾಗಿ ಒಂದಾಗುವಂತೆ ಪಾಕ್ಗೆ ಸಲಹೆ ನೀಡಿದ್ರು. ಒಟ್ನಲ್ಲಿ ಭವ್ಯ ಭಾರತದ ಭಾಗ್ಯೋದಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮುನ್ನಡಿ ಬರೆದ್ರು.
No comments:
Post a Comment